ಸುದ್ದಿ ಸಂಕ್ಷೇಪ
ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಇಂದು ಪ್ರತಿಭಟನೆ
ಗದಗ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಬೋಡೋ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಗದುಗಿನ ಹೆಮ್ಮೆಯ ವೀರಯೋಧ ಶಂಕ್ರಯ್ಯ ಹಿರೇಮಠ ಅವರ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಜು. 24ರ ಬೆಳಗ್ಗೆ 10 ಗಂಟೆಗೆ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗುವುದೆಂದು ಸ್ನೇಹ ಲೋಕ ವಿವಿಧೋದ್ದೇಶ ಸಂಘದ ಬಸವರಾಜ ಆರಟ್ಟಿ, ರಾಜೀವ ದೀಕ್ಷಿತ್ ಪ್ರತಿಷ್ಠಾನ ಸಮಿತಿಯ ನೀಲಪ್ಪಗೌಡ ದಾನಪ್ಪಗೌಡರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಗಿಲ್ ಯುದ್ಧ ಮುಗಿದು 13 ವರ್ಷ ಕಳೆದರೂ ಇದುವರೆಗೆ ವೀರಯೋಧ ಶಂಕ್ರಯ್ಯ ಹಿರೇಮಠ ಪುತ್ಥಳಿಯನ್ನು ನಗರದಲ್ಲಿ ನಿರ್ಮಿಸದೇ ಇರುವುದು ನೋವಿನ ಸಂಗತಿ. ಈ ಬಗ್ಗೆ ಹಲವಾರು ಸಂಘಟನೆಗಳು ಹೋರಾಟ ಮಾಡಿವೆ. ಕೆಲವು ಸಂಘಟನೆಗಳು ವೀರೇಶ್ವರ ಲೈಬ್ರರಿ ವೃತ್ತದಲ್ಲಿ ವೀರಯೋಧ ಶಂಕ್ರಯ್ಯ ಹಿರೇಮಠ ಭಾವ ಚಿತ್ರ ಅನಾವರಣ ಮಾಡಿ, ಅಲ್ಲಿಯೇ ಪುತ್ಥಳಿ ಸ್ಥಾಪಿಸಲು ಆಗ್ರಹಿಸಲಾಗಿತ್ತು. ಆದರೆ, ರಾಜಕೀಯ ಷಡ್ಯಂತ್ರದಿಂದ ಆ ವೃತ್ತದಲ್ಲಿ ರಾಜಕೀಯ ನಾಯಕರೊಬ್ಬರ ಪುತ್ಥಳಿ ಅನಾವರಣ ಮಾಡಿ ವೀರಯೋಧ ಶಂಕ್ರಯ್ಯ ಹಿರೇಮಠರವರ ಪುತ್ಥಳಿಯನ್ನು ಬೇರೆ ಕಡೆ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಪುತ್ಥಳಿ ಸ್ಥಾಪನೆಯಾಗಿಲ್ಲ. ಕಾರಣ ಜುಲೈ 26 ರಂದು ಕಾರ್ಗಿಲ್ ಯುದ್ಧದ ಜಯದ ನಿಮಿತ್ತ ದೇಶಾದ್ಯಂತ ವಿಜಯೋತ್ಸವ ಆಚರಿಸಲಾಗುತ್ತಿದೆ. ಜುಲೈ 26 ರೊಳಗೆ ಪುತ್ಥಳಿ ಅನಾವರಣಕ್ಕೆ ಮುಂದಾಗದಿದ್ದರೆ ಕಾರ್ಗಿಲ್ ವಿಜಯೋತ್ಸವದ ದಿನದಂದು ಕಾರ್ಗಿಲ್ ಕರಾಳ ದಿನವಾಗಿ ಗದುಗಿನಲ್ಲಿ ಆಚರಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈರವ್ವ ಅಕ್ಕಿ ನಿಧನ
ಶಿರಹಟ್ಟಿ: ಪಟ್ಟಣದ ಶೆಟ್ಟರ ಓಣಿಯ ನಿವಾಸಿ ಈರವ್ವ ಸಿದ್ಧರಾಮಪ್ಪ ಅಕ್ಕಿ (82) ಮಂಗಳವಾರ ಬೆಳಗಿನ ಜಾವ ನಿಧನರಾದರು. ಮೃತರು ಪತಿ, ಓರ್ವ ಪುತ್ರ, ಬಂಧು-ಬಳಗ ಅಗಲಿದ್ದಾರೆ. ಇವರ ನಿಧನಕ್ಕೆ ಡಿ.ಎನ್. ಡಬಾಲಿ, ಬಸಲಿಂಗಪ್ಪ ಕಪ್ಪತ್ತನವರ, ವೈ.ಎಸ್.ಪಾಟೀಲ, ಎನ್.ಆರ್. ಕುಲಕರ್ಣಿ, ಚಂದ್ರಕಾಂತ ನೂರಶೆಟ್ಟರ, ಬಸವರಾಜ ಹೊಸೂರ, ಕೆ.ಎ. ಬಳಿಗೇರ, ಎಂ.ಡಿ. ಕಡ್ಲಿಕೊಪ್ಪ, ವಿ.ವಿ. ಅಮರಶೆಟ್ಟರ ಸಂತಾಪ ಸೂಚಿಸಿದ್ದಾರೆ.