ಸೋಲಿನಿಂದ ಹತಾಶರಾದ ಬಂಡಿ: ಆರಗಿದ್ದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 23
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಸಚಿವ, ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಕಳಕಪ್ಪ ಬಂಡಿ ಹೇಳಿಕೆ ಸೋಲಿನ ಹತಾಶೆ ಪ್ರತೀಕವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುಭಾನಸಾಬ ಆರಗಿದ್ದಿ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಜನ ಸಂಪರ್ಕ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟಿರುವ ಮಾಜಿ ಸಚಿವ ಕಳಕಪ್ಪ ಬಂಡಿ ಅಧಿಕಾರ ಕಳೆದುಕೊಂಡು ನೀರಿನಿಂದ ಹೊರಗೆ ತೆಗೆದ ಮೀನಿನಂತಾಗಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ವ್ಯಕ್ತಿತ್ವದಲ್ಲಿ ಭೂಮಿ, ಆಕಾಶದಷ್ಟೆ ಅಂತರವಿದೆ. ಒರಟುತನ ಬಿಜೆಪಿ ನಾಯಕರ ಶೈಲಿಯ ಅವಿಭಾಜ್ಯ ಅಂಗವಾಗಿದೆ. ಕಂಡ ಕಂಡವರ ಮೈ ಮೇಲೆ ಏರಿ ಹೋಗುವ, ಕಾಲು ಕೆದರಿ ಜಗಳಕ್ಕೆ ನಿಲ್ಲುವ ಸ್ವಭಾವ ಆ ಪಕ್ಷದ್ದಾಗಿದೆ. ಯಾರನ್ನು ಸಹಿಸಿಕೊಳ್ಳುವ ಮನಸ್ಥಿತಿ ಆ ಪಕ್ಷದ ನಾಯಕರಲ್ಲಿಲ್ಲ. ಇದೆಲ್ಲದರಿಂದ ಬೇಸತ್ತು ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಮಾಜಿ ಸಚಿವರ ಮೊದಲಿನ ಆರ್ಥಿಕ ಸ್ಥಿತಿ ಹೇಗಿತ್ತು. ಶಾಸಕ, ಸಚಿವ ಸ್ಥಾನ ದೊರೆತ ಬಳಿಕ ಹೇಗಾಗಿದೆ ಎಂಬುದನ್ನು ಜನ ಕಂಡಿದ್ದಾರೆ. ಅಭಿವೃದ್ಧಿಗಾಗಿ ಸರ್ಕಾರದಿಂದ ಹರಿದು ಬಂದ್ ಹಣದಲ್ಲಿ ಪರ್ಸೆಂಟೇಜ್ ಪಡೆದಿದ್ದಾರೆ ಎಂಬುದಕ್ಕೆ ಕಳಪೆ ಕಾಮಗಾರಿಗಳೇ ಸಾಕ್ಷಿ. ನೌಕರರ ವರ್ಗಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಹಫ್ತಾ ವಸೂಲಿಯಲ್ಲಿ ತೊಡಗಿದ್ದಾರೆ ಎಂಬುದು ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಹಫ್ತಾ ವಸೂಲಿ ಬಿಜೆಪಿ ಸಂಸ್ಕೃತಿ ಹೊರತು ಕಾಂಗ್ರೆಸ್‌ನದ್ದಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರ ತೇಜೋವಧೆ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿ, ಜನರ ದಿಕ್ಕು ತಪ್ಪಿಸುವ ಕೆಲಸವಾಗಿದೆ. ತಾವೂ ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದು ಅವರ ಘನತೆಗೆ ಶೋಭೆ ತರುವಂತದ್ದಲ್ಲ ಎಂದರು.
ಜಿಲ್ಲಾ ಕಾರ್ಯದರ್ಶಿ ಶಶಿಧರ ಹೂಗಾರ, ಗಿರೀಶ ರಂಗ್ರೇಜಿ, ರವಿ ಗಡೇದವರ, ಮೋಹನಸಾ ರಾಯಬಾಗಿ, ದತ್ತುಸಾ ಬಾಕಳೆ, ದಾದೇಸಾಬ ಹಣಗಿ, ಬಾಬಣ್ಣಾ ನದಾಫ್, ಶಶಿಧರ ವಕ್ಕಲರ್ ಉಪಸ್ಥಿತರಿದ್ದರು.