ಮಹಿಳೆಯರಿಗೆ ಕಾನೂನು ತಿಳಿವಳಿಕೆ ಅವಶ್ಯ: ಕನ್ನೂರ
ಲಕ್ಷ್ಮೇಶ್ವರ: ಮಹಿಳೆಯರ ಮೇಲೆ ನಿತ್ಯ ಅನೇಕ ದೌರ್ಜನ್ಯಗಳು ಜರುಗುತ್ತಿವೆ. ಅದಕ್ಕಾಗಿ ಮಹಿಳೆಯರು ಕಾನೂನಿನ ತಿಳಿವಳಿಕೆ ಹೊಂದುವುದು ಅಗತ್ಯವಾಗಿದೆ ಎಂದು ಪಟ್ಟಣದ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಶಿರಹಟ್ಟಿ ತಾಲೂಕು ಕಾನೂನು ಸೇವಾ ಸಮಿತಿ, ಲಕ್ಷ್ಮೇಶ್ವರ ವಕೀಲರ ಸಂಘ, ಉಚಿತ ಕಾನೂನು ಸಲಹಾ ಕೇಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಮಹಿಳಾ ಪಪೂ ಕಾಲೇಜಿನಲ್ಲಿ ಜರುಗಿದ ವಿದ್ಯಾರ್ಥಿನಿಯರಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಮುಚ್ಚಿಟ್ಟುಕೊಳ್ಳದೇ ಕಾನೂನಿನ ಪರಿಹಾರ ಪಡೆದುಕೊಳ್ಳಲು ಮುಂದೆ ಬರಬೇಕು ಎಂದರು. ನ್ಯಾಯವಾದಿ ಎನ್.ಸಿ. ಅಮಾಸಿ ಹಾಗೂ ಪಿಎಸ್ಐ ಶಿವಕುಮಾರ ಮುಚ್ಚಂಡಿ ಉಪನ್ಯಾಸ ನೀಡಿದರು. ಸಿಡಿಪಿಓ ಎಸ್.ಕೆ. ಹೊನ್ನೇಗೌಡರ, ನ್ಯಾಯವಾದಿ ಎ.ಬಿ. ಪಾಟೀಲ. ಪ್ರಾ. ಆರ್.ವಿ. ಪಾಟೀಲ ಮಾತನಾಡಿದರು. ಉಪತಹಸೀಲ್ದಾರ್ ಮೋಹನ ಕಟ್ಟಿಮನಿ, ಸರ್ಕಾರಿ ಅಭಿಯೋಜಕಿ ಗುರುಸಿದ್ದಮ್ಮ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಬಿ.ಎನ್. ರಾಟಿ, ಜಯಶ್ರೀ ಗುಡಿ, ಬಿ.ಎಸ್. ಬಾಳೇಶ್ವರಮಠ, ಮಹೇಶ ಹಾರೊಗೇರಿ, ಎನ್.ಸಿ. ಪಾಟೀಲ, ಬಿ.ಎಸ್. ಘೊಂಗಡಿ, ಎ.ಎನ್. ನಾವಿ, ಎಸ್.ಎನ್. ಮಳಲಿ ಮುಂತಾದವರು ಇದ್ದರು.