ಮಾಡಲಗೇರಿ ಶಾಲೆ ದುಶ್ಚಟಗಳ ಅಡ್ಡೆ!
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜು. 24
ಶಾಲೆ ಎಂದಾಕ್ಷಣ ನಾವೆಲ್ಲರೂ ಅದು ದೇವಾಲಯ ಎಂದು ಪೂಜಿಸುತ್ತೇವೆ, ಗೌರವಿಸುತ್ತೇವೆ. ಆದರೆ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆ ಅಧ್ವಾನಗಳಿಂದ ತುಂಬಿ ಹೋಗಿದ್ದು, ಶಿಕ್ಷಣ ಹೊರತುಪಡಿಸಿ, ಇನ್ನಿತರ ಎಲ್ಲ ಕಾರ್ಯಕ್ಕೂ ಬಳಕೆಯಾಗುತ್ತಿದೆ.
ಈ ಶಾಲೆ ಆವರಣಕ್ಕೆ ಭೇಟಿ ನೀಡುತ್ತಿದ್ದಂತೆ ಕುಡಿದು ಬಿಸಾಡಿದ ಬಿಯರ್ ಟಿನ್‌ಗಳು, ಇಸ್ಟೀಟ್ ಎಲೆಗಳು, ಸಿಗರೇಟ್, ಬೀಡಿ, ಗುಟಖಾ ಚೀಟಿಗಳು ನಮ್ಮನ್ನು ಸ್ವಾಗತಿಸುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಕಡಿಮೆ ಸ್ಥಳಾವಕಾಶವಿರುವುದರಿಂದ ಊಟ ಮಾಡಿ ಶಾಲೆಯ ಮೈದಾನದಲ್ಲಿ ಅಥವಾ ಆವರಣದಲ್ಲಿ ಸಾರ್ವಜನಿಕರು ಮಲಗಿಕೊಳ್ಳುವುದು ವಾಡಿಕೆ.
ಶಾಲೆ ಆವರಣದಲ್ಲಿ ಮಲಗುವವರೇ ಶಾಲೆಗಳನ್ನು ಸುಂದರವಾದ ತೋಟಗಳನ್ನಾಗಿ ಅಭಿವೃದ್ಧಿಪಡಿಸಿದ ಉದಾಹರಣೆಗಳಿವೆ. ಆದರೆ ಮಾಡಲಗೇರಿ ಗ್ರಾಮದಲ್ಲಿನ ಶಾಲೆ ಮಾತ್ರ ಇದಕ್ಕೆ ಅಪವಾದ. ರಾತ್ರಿ ವೇಳೆಯಲ್ಲಿ ಜೂಜು ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆ ನಡೆಯುತ್ತವೆ ಎನ್ನುವುದಕ್ಕೆ ಶಾಲೆ ಆವರಣದಲ್ಲೊಮ್ಮೆ ಸುತ್ತಿದಾಗ ಗೊತ್ತಾಗುತ್ತದೆ.
ಎಲ್ಲೆಂದರಲ್ಲಿ ಗಲೀಜು: ಈ ಶಾಲೆ ಗೋಡೆಗಳ ಮೇಲೆ, ಮುಖ್ಯ ದ್ವಾರದಲ್ಲಿ ಎಲ್ಲೆಂದರಲ್ಲಿ ಎಲೆ ಅಡಕೆ, ಗುಟ್ಕಾ ಉಗುಳಿದ ಕಲೆಗಳಿವೆ. ಆವರಣ ತುಂಬೆಲ್ಲ ವಿವಿಧ ಬ್ರ್ಯಾಂಡ್‌ನ ಪೌಚ್‌ಗಳು ಬಿದ್ದಿವೆ. ಮಕ್ಕಳೇ ನಿರ್ಮಿಸಿರುವ ಗಿಡಗಳ ಮಧ್ಯೆ ಕುಡಿದು ಬಿಸಾಕಿದ ಬಿಯರ್ ಬಾಟಲ್‌ಗಳು, ಎಲುಬಿನ ತುಕಡಿಗಳು ಬಿದ್ದಿದ್ದು, ವಾತಾವರಣ ಕಲುಷಿತಗೊಂಡಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಉತ್ತಮ ವಿಷಯಗಳಿಗೆ ಪ್ರೇರಣೆಯಾಗಬೇಕಿದ್ದ ಶಾಲೆಯಲ್ಲಿ ಇಷ್ಟೆಲ್ಲ ಅಧ್ವಾನ ನಡೆಯುತ್ತಿದ್ದರೂ ಶಾಲಾ ಆಡಳಿತ ಮಂಡಳಿ ಸುಮ್ಮನಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಬಡವರ ಮಕ್ಕಳಿಗೆ ಮಾತ್ರ ತೊಂದರೆ: ಶಾಲೆಯಲ್ಲಿನ ಈ ಅವ್ಯವಸ್ಥೆ ಕುರಿತು ಬೇಸತ್ತಿರುವ ಗ್ರಾಮದ ಕೆಲವರು (ಉಳ್ಳವರು) ತಮ್ಮ ಮಕ್ಕಳನ್ನು ರೋಣ ಸೇರಿದಂತೆ ಬೇರೆ ಬೇರೆ ಊರಿನ ಶಾಲೆಯಲ್ಲಿ ಹೆಸರು ನೋಂದಾಯಿಸಿಕೊಂಡು ಈ ಶಾಲೆಯ ಸಹವಾಸವನ್ನೇ ಬಿಟ್ಟಿದ್ದಾರೆ. ಸದ್ಯ ತೊಂದರೆ ಅನುಭವಿಸುತ್ತಿರುವವರು ಬಡವರ ಮಕ್ಕಳು ಮಾತ್ರ. ಅದಕ್ಕಾಗಿ ಶಿಕ್ಷಣ ಇಲಾಖೆ, ಕ್ಷೇತ್ರದ ಶಾಸಕರು ಈ ಬಗ್ಗೆ ಕೂಡಲೇ ಗಮನ ಹರಿಸಿ, ಸಮಸ್ಯೆ ಇತ್ಯರ್ಥ ಪಡಿಸಿ, ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕಿದೆ.
ಈ ಬಗ್ಗೆ ನಾವು ಈಗಾಗಲೇ ಹಿರಿಯ ಅಧಿಕಾರಿಗಳಿಗೆ, ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆ ಆವರಣದಲ್ಲಿನ ಕೆಲ ಕೊಠಡಿಗಳನ್ನು ಬೀಗ ಹಾಕದೇ ಹೋಗುವ ರೂಢಿಸಿಕೊಂಡಿರುವುದರಿಂದಲೇ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ, ಸಮಸ್ಯೆ ಇತ್ಯರ್ಥ ಪಡಿಸಬೇಕು. ಮುಖ್ಯೋಪಾಧ್ಯಾಯರು ಸಮರ್ಪಕ ಕಾರ್ಯ ನಿರ್ವಹಿಸಲು ಸೂಚಿಸಬೇಕು. ಇಲ್ಲವೇ ಬೇರೆಡೆ ವರ್ಗಾವಣೆ ಮಾಡಬೇಕು.
- ಬಸವರಾಜ ಭಾವಿ,
ಜೆಡಿಎಸ್ ಕಾರ್ಯಾಧ್ಯಕ್ಷ, ರೋಣ
ಮಾಡಲಗೇರಿಯಲ್ಲಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನೇ ಭೇಟಿ ನೀಡಿ ಪರಿಶೀಲಿಸುತ್ತೇನೆ. ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸುವುದು ಹಾಗೂ ಸ್ಥಳೀಯ ಕೆಲಸ ಮಾಡುವ ಅಧಿಕಾರಿಗಳಿಗೆ ಎಚ್ಚರಿಕೆಗೆ ನೋಟಿಸ್ ನೀಡಲಾಗಿದೆ.
-ರಾಜೀವ ನಾಯಕ
ಡಿಡಿಪಿಐ ಗದಗ