ವೀರಯೋಧನ ಪುತ್ಥಳಿ ನಿರ್ಮಿಸಿ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಜು. 24
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಬೋಡೋ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಗದುಗಿನ ವೀರಯೋಧ ಶಂಕ್ರಯ್ಯ ಹಿರೇಮಠ ಅವರ ಪುತ್ಥಳಿಯನ್ನು ಗದಗನ ಪ್ರಮುಖ ವೃತ್ತದಲ್ಲಿ ಅನಾವರಣಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬುಧವಾರ ನಗರದ ಗಾಂಧಿ ವೃತ್ತದಲ್ಲಿ ಸ್ನೇಹಲೋಕ ವಿವಿಧೋದ್ದೇಶ ಸಂಘ ಹಾಗೂ ರಾಜೀವ್ ದೀಕ್ಷಿತ್ ಪ್ರತಿಷ್ಠಾನ ಗದಗ ಇವುಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ವೀರಯೋಧ ಶಂಕ್ರಪ್ಪ ಹಿರೇಮಠ ಬಲಿಯಾಗಿ 12 ವರ್ಷಗಳೂ ಕಳೆದರೂ ಇಲ್ಲಿಯವರೆಗೂ ಅವರ ಪುತ್ಥಳಿ ನಗರದಲ್ಲಿ ನಿರ್ಮಿಸದೇ ಇರುವುದು ನೋವಿನ ಸಂಗತಿ. ಈ ಕುರಿತು ಹಲವಾರು ಪ್ರಗತಿಪರ ಸಂಘಟನೆಗಳು ಹಲವು ವರ್ಷಗಳಿಂದಲೂ ಹೋರಾಟ ಮಾಡುತ್ತ ಬಂದಿದ್ದರೂ ಜಿಲ್ಲಾಡಳಿತ ಪುತ್ಥಳಿ ಅನಾವರಣಕ್ಕೆ ಮುಂದಾಗದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಹಿಂದೆ ಹಲವು ಸಂಘಟನೆಗಳು ನಗರದ ವೀರೇಶ್ವರ ಲೈಬ್ರರಿ ಬಳಿಯ ವೃತ್ತದಲ್ಲಿ ವೀರಯೋಧ ಶಂಕ್ರಪ್ಪನ ಪುತ್ಥಳಿ ಅನಾವರಣಗೊಳಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದವು. ಆದರೆ, ರಾಜಕೀಯ ಶಡ್ಯಂತ್ರದಿಂದ ಆ ವೃತ್ತದಲ್ಲಿ ರಾಜಕೀಯ ಮುಖಂಡರೊಬ್ಬರ ಪುತ್ಥಳಿ ಅನಾವರಣಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಬೇರೆ ಕಡೆ ವೀರಯೋಧನ ಪುತ್ಥಳಿಯನ್ನು ಇನ್ನು ಕೆಲವೇ ದಿನಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ, ಈ ಭರವಸೆ ನೀಡಿ ಹಲವು ವರ್ಷಗಳಾದರೂ ಇಲ್ಲಿಯವರೆಗೆ ಈಡೇರಿಲ್ಲ. ಜು. 26 ರೊಳಗೆ ಸೂಕ್ತ ಸ್ಥಳದಲ್ಲಿ ವೀರಯೋಧನ ಪುತ್ಥಳಿ ಅನಾವರಣಗೊಳಿಸಬೇಕು. ಇಲ್ಲದಿದ್ದಲ್ಲಿ ಜು. 26 ರಂದು ಕಾರ್ಗಿಲ್ ವಿಜಯೋತ್ಸವದ ಬದಲಾಗಿ ಕಾರ್ಗಿಲ್ ಕರಾಳ ದಿನಾಚರಣೆಯನ್ನು ಹಮ್ಮಿಕೊಳ್ಳುವ ಮೂಲಕ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ನಾಗರಾಜ ಅವರಿಗೆ ಮನವಿ ಸಲ್ಲಿಸಿದರು. ಸ್ನೇಹಲೋಕ ವಿವಿದ್ಧೋದ್ದೇಶ ಸಂಘದ ಅಧ್ಯಕ್ಷ ಬಸವರಾಜ ಆರಟ್ಟಿ, ರಾಜೀವ್ ದೀಕ್ಷಿತ್ ಸಮಿತಿಯ ಅಧ್ಯಕ್ಷ ನೀಲಪ್ಪಗೌಡ ದಾನಪ್ಪಗೌಡ್ರ, ಬಸಯ್ಯ ನಂದಿಕೋಲಮಠ, ಬಾಪು ಆರಟ್ಟಿ, ವಿಶ್ವನಾಥ ಶಿರಿ, ಎಚ್.ಎಫ್. ಆಲೂರ, ಸಿದ್ದಪ್ಪ ಚಳ್ಳಮರದ, ಶರಣಪ್ಪ ಮಂಗಳಗುಡ್ಡ, ದಾನು ದಾನಪ್ಪಗೌಡ್ರ, ಶರಣಪ್ಪ ಮಂಗಲಗುಡ್ಡ, ವೀರೇಶ ಹೂಗಾರ, ನಾಗರಾಜ ಹಂಡಿ, ಕಳಕಪ್ಪ ಬಂಡಿಹಾಳ, ಮಹೇಶ ಮೂಗನೂರ, ಸಿದ್ಧನಗೌಡ ಗೌಡಪ್ಪಗೌಡ್ರ ಮುಂತಾದವರು ಉಪಸ್ಥಿತರಿದ್ದರು.