ಸೇವಾದಳ ಬಗ್ಗೆ ತಿಳಿವಳಿಕೆ ನೀಡಿ
ಮುಂಡರಗಿ: ಭಾರತ ಸೇವಾದಳದ ಮೂಲಕ ಮಕ್ಕಳಲ್ಲಿ ಶಿಸ್ತು ಮತ್ತು ದೇಶಭಕ್ತಿ ತುಂಬುವ ಕಾರ್ಯ ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲಿಯೂ ಸೇವಾದಳದ ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಜನತೆಗೆ ಅದರ ಕುರಿತು ತಿಳಿವಳಿಕೆ ನೀಡುವುದು ಅವಶ್ಯ ಎಂದು ಜಿಲ್ಲಾ ಸೇವಾದಳ ಸಮಿತಿ ಸದಸ್ಯ ಹೇಮಂತಗೌಡ ಪಾಟೀಲ ಹೇಳಿದರು.
ಅವರು ಈಚೆಗೆ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರಾಥಮಿಕ, ಪ್ರೌಢಶಾಲೆ ಆವರಣದಲ್ಲಿ ಸೇವಾದಳ ತರಬೇತಿ ಹೊಂದಿದ ತಾಲೂಕು ಮಟ್ಟದ ಸೇವಾದಳ ಮಿಲಾಪಿ ಶಿಬಿರ, ಸೇವಾದಳ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಭಾವೈಕ್ಯ, ದೇಶಪ್ರೇಮ ಮೂಡಿಸಿ ಸೇವಾದಳ ಸದೃಢಗೊಳ್ಳುವ ಹೊಸ ಕಾರ್ಯಕ್ರಮಗಳು ತಾಲೂಕಾದ್ಯಂತ ನಡೆಯಬೇಕು ಎಂದರು.
ತಾಲೂಕು ಸೇವಾದಳದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ನಾ.ಸು. ಹರ್ಡೇಕರ ಸೇವಾದಳ ಶಾಖೆ ಉದ್ಘಾಟಿಸಿ ಮಾತನಾಡಿ, ಭಾರತ ಸೇವಾದಳ ಎಂದರೆ ನೀನು ಒಳ್ಳೆಯವನಾಗಿರು, ಒಳ್ಳೆಯದನ್ನೇ ಮಾಡು ಎನ್ನುವುದು. ಸೇವೆ, ತ್ಯಾಗದ ಸಂಕೇತವಾಗಿರುವ ಸೇವಾದಳದ ಕಾರ್ಯ ನಿರಂತರವಾಗಿರಲಿ. ಭಾರತದ ಸಂಸ್ಕೃತಿ ಬಿಂಬಿಸುವ ಸೇವಾದಳ ಆರ್ಥಿಕವಾಗಿ ಸದೃಢವಾಗಲು ಸರ್ಕಾರ ಬಜೆಟ್ನಲ್ಲಿ ಅದಕ್ಕಾಗಿ ಪ್ರತ್ಯೇಕ ಅನುದಾನ ತೆಗೆದಿರಿಸಬೇಕು. ಸೇವಾದಳ ಸ್ಥಾಪನೆಗೆ ಕಾರಣರಾದ ಹರ್ಡೇಕರ ಅವರ ಸ್ಮರಣೆ ಮತ್ತು ಸ್ಫೂರ್ತಿಯಿಂದ ಶಾಖೆಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಭಾರತ ಸೇವಾದಳ ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರುವುದಲ್ಲ. ಇಡೀ ಭಾರತಕ್ಕೆ ಬೇಕಾದ ಸಂಸ್ಥೆಯಾಗಿದೆ ಎಂದರು.
ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎಂ.ಎ. ರಡ್ಡೇರ, ಮಲ್ಲಣ್ಣ ಹಳೇಮನಿ, ಸೀತಾರಾಮ ರಾಜು, ಈಶ್ವರಪ್ಪ ಹಂಚಿನಾಳ, ವಿ.ಸಿ. ಹಂಚಿನಾಳ, ಎಸ್.ವಿ. ಪಾಟೀಲ, ಎಸ್.ಬಿ. ಇಟಿಗಿ, ಕೆ.ಎಚ್. ಬಾರಕೇರ, ಕೊಟ್ರೇಶ ಕಟಗಿ, ಕುಮಾರಸ್ವಾಮಿ ಬಳ್ಳಾರಿ, ಎಸ್.ಎಸ್. ಮುಂಡರಗಿ, ವೈ.ಎಚ್. ಬಚೇನಹಳ್ಳಿ ಇದ್ದರು.