ಮಹಿಳೆ, ರೈತರ ಬವಣೆ ತೀರಿಲ್ಲ: ಶ್ರೀ
ಕನ್ನಡಪ್ರಭ ವಾರ್ತೆ, ಗದಗ, ಜು. 25
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಅರ್ಧ ಶತಮಾನ ಮೇಲಾದರೂ ಇಂದಿಗೂ ದೇಶದ ಮಹಿಳೆ ಹಾಗೂ ರೈತರ ಬವಣೆಗಳು ತೀರಿಲ್ಲ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಅಭಿಪ್ರಾಯಪಟ್ಟರು.
ಈಚೆಗೆ ಅವರು ಸ್ಥಳೀಯ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದ 2129ನೇ ಶಿವಾನುಭವದಲ್ಲಿ ನಡೆದ ಮಹಿಳೆಯರ ಹಕ್ಕು ಬಾಧ್ಯತೆ ಕುರಿತಾದ ಉಪನ್ಯಾಸ-ಚಿಂತನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕೇವಲ ಪ್ರಚಾರದ ಉದ್ದೇಶಕ್ಕಾಗಿ ಸ್ತ್ರೀ ಸಮಾನತೆ, ರೈತರ ಉದ್ಧಾರ ಪದಗಳು ಇಂದು ಹೆಚ್ಚು ಬಳಕೆಯಾಗುತ್ತಿರುವುದು ವಿಷಾದನೀಯ. ದೇಶದಲ್ಲಿ ಕೃಷಿಗೆ ಮೂಲಾಧಾರವಾದ ರೈತ ಸಮೂಹವನ್ನು ಇಂದಿಗೂ ಗಾಢಾಂಧಕಾರದಲ್ಲಿ ಇಡಲಾಗಿದೆ. ಮಹಿಳೆಯರ ಮೇಲಿನ ಶೋಷಣೆಗಳು ಅನ್ಯಾಯಗಳು ಹೆಚ್ಚುತ್ತಲೇ ಸಾಗಿರುವುದು ನೋಡಿದರೆ ಇದು ದೇಶದ ಸಂಸ್ಕೃತಿ-ನಾಗರಿಕತೆ-ಸ್ವಾತಂತ್ರ್ಯಕ್ಕೆ ಬಗೆದ ಘೋರ ಅಪಚಾರ ಎಂದರು.
ಪ್ರಜ್ಞಾವಂತಿಕೆ ಎಂಬುದು ಕೇವಲ ಅಂಕಗಳಿಸುವ ಶಿಕ್ಷಣದಿಂದ ಬರುವಂತಹದ್ದಲ್ಲ. ಅದಕ್ಕಿಂತ ಮಿಗಿಲಾದ ಆತ್ಮಸ್ಥೈರ್ಯ ತರುವ ಚಾರಿತ್ರ್ಯ, ನೈತಿಕ ಮೌಲ್ಯಗಳ ಸಂಸ್ಕಾರಗಳು ಹೆಚ್ಚು ಪ್ರಚುರಗೊಂಡಾಗ ಹಾಗೂ ಒಬ್ಬ ವ್ಯಕ್ತಿ ಇತರರರಿಗೆ ಬೋಧನೆ ಮಾಡುವ ಮೊದಲು ತನ್ನಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುತ್ತ ಆತ್ಮಾವಲೋಕನ ಮಾಡುತ್ತ ಸಾಗಿದಾಗ ರೈತರು ಹಾಗೂ ಮಹಿಳೆಯರನ್ನು ಶೋಷಣೆ ಮುಕ್ತ ಸುವ್ಯವಸ್ಥೆಯಲ್ಲಿಡುವ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶಿಲ್ಪಾ ಪಾಟೀಲ, ಮಹಿಳೆಯರಿಗೆ ಇಂದು ಅನುಕಂಪವಲ್ಲ, ಅವಕಾಶಗಳು ಬೇಕು ಎಂಬ ವಿಷಯ ಕುರಿತು ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಉಪಾದ್ಯಕ್ಷೆ ಶಿವಲೀಲಾ ಕುರಡಗಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಮುಂತಾದವರು ಇದ್ದರು.
ಶಿವಾನುಭವ ಸಮಿತಿ ಚೇರ್ಮನ್ ಪ್ರೊ. ಎಸ್.ಎನ್. ಆದಿ ಸ್ವಾಗತಿಸಿದರು. ಮಂಜುಳಾ ಹಾಸಿಲಕರ ನಿರೂಪಿಸಿದರು.