ಸುದ್ದಿ ಸಂಕ್ಷೇಪ
ಶಿರೋಳ ಗ್ರಾಪಂ ಭಾರಿಅವ್ಯವಹಾರ: ಚೌಕಮಠ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ಗ್ರಾಪಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ಡಾ. ಎಸ್.ಬಿ. ಚೌಕಮಠ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, 2010-11ನೇ ಸಾಲಿನ ವರ್ಗ-1(ನಿಧಿ-1) ಸರಕಾರಿ 6 ಲಕ್ಷ ಯೋಜನೆ ಕಾಮಗಾರಿ ಖರ್ಚಿನ ವಿವರದಲ್ಲಿ ಶಿರೋಳ ಗ್ರಾಮದ ಅಯ್ಯಪ್ಪನ ಬಾವಿ ಸ್ವಚ್ಛಗೊಳಿಸಿದ್ದೇವೆಂದು ರು. 16,852 ಖರ್ಚಿನ ಬಾಬತ್ತಿನಲ್ಲಿ ತೋರಿಸಿರುವರು. ಆ ನಂತರ ಕಾಮಗಾರಿಯ ಬಗ್ಗೆ ಸಂಪೂರ್ಣ ಕಡತಗಳನ್ನು ಹಾಗೂ ಪೋಟೋಗ್ರಾಫಿಗಳನ್ನು ಮಾಹಿತಿ ಹಕ್ಕಿನಡಿ ಕೇಳಿದಾಗ ಯಾವುದೇ ರೀತಿಯಲ್ಲಿ ಈ ಕಾಮಗಾರಿ ನಡೆದಿಲ್ಲ ಹಾಗೂ ಹಣವನ್ನು ಬಳಸಿರುವುದಲ್ಲಿ ಎಂದು ಈ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂಬಂಧವಿಲ್ಲದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾನೆ. ಆದ್ದರಿಂದ ಈ ಗ್ರಾಪಂನಲ್ಲಿ ಉದ್ಯೋಗ ಖಾತರಿ ಸೇರಿದಂತೆ ಕೃಷಿ ಹೊಂಡ, ನೀರು ಪೂರೈಕೆ, ಚರಂಡಿ, ರಸ್ತೆ, ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ಆಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರೋಣ: 28ರಂದು ಸಭೆ
ರೋಣ: ಸ್ಥಳೀಯ ಶರಣ ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಸಭೆ ಜು. 28ರಂದು ಬೆಳಗ್ಗೆ 10ಕ್ಕೆ ಕರೆಯಲಾಗಿದೆ. ಮಂಡಳಿಯ ಬದಲಾವಣೆ, ಸಮುದಾಯ ಭವನದ ಉದ್ಘಾಟನೆ, ಸಾಂಸ್ಕೃತಿಕ ಭವನದ ಭೂಮಿ ಪೂಜೆ ಸಮಾರಂಭದ ಕುರಿತು ಮತ್ತು ಅಧ್ಯಕ್ಷರ ಅಪ್ಪಣೆ ಮೇರೆಗೆ ಬರತಕ್ಕಂತಹ ಇತರೆ ವಿಷಯಗಳನ್ನು ಚರ್ಚಿಸುವುದಾಗಿ ಸಂಘದ ತಾಲೂಕು ಘಟಕದ ಅಧ್ಯಕ್ಷ ವೈ.ಬಿ. ಚೋಳಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಬೆಟಗೇರಿ: ದೇವಾಂಗ ಸಮಾಜದ ಹಿರಿಯ ಸಹಕಾರಿ ಧುರೀಣರು ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಆಗಿದ್ದ ದಿ. ಎಫ್.ಎಂ. ಬರದ್ವಾಡರವರ ಸ್ಮರಣಾರ್ಥವಾಗಿ ದೇವಾಂಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೇ, ಜೂನ್ 2013ರಲ್ಲಿ ಜರುಗಿದ ಯಾವುದೇ ವಿಶ್ವವಿದ್ಯಾಲಯದ ಬಿಎ, ಬಿಕಾಂ, ಬಿಎಸ್ಸಿ ಅಂತಿಮ ವರ್ಷದಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದಿರುವ ದೇವಾಂಗ ಸಮಾಜದ ವಿದ್ಯಾರ್ಥಿಗಳು ಮಾತ್ರ ಅರ್ಹತೆ ಪಡೆಯಲಿದ್ದು, ಇದರಲ್ಲಿಯೇ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಮೂವರು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮೂರು ವಿಭಾಗಗಳಿಗೆ ನಗದು ಪಾರಿತೋಷಕಗಳನ್ನು ನೀಡಲಾಗುವುದು. ಅರ್ಹ ದೇವಾಂಗ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿಯ ಝರಾಕ್ಸ್ ಪ್ರತಿಯನ್ನು ಅರ್ಜಿಯೊಂದಿಗೆ 31 ಆಗಸ್ಟ್, 2013ರ ಒಳಗಾಗಿ ರಾಜೇಂದ್ರ ಎಫ್. ಬರದ್ವಾಡ, ಮಲ್ಲರಾಯನ ಕಟ್ಟಿ ಓಣಿ, ಟೆಂಗಿನಕಾಯಿ ಬಜಾರ ಹತ್ತಿರ, ಪೋಸ್ಟ್ ಬೆಟಗೇರಿ-ಗದಗ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಅಂಗನವಾಡಿ ಹುದ್ದೆ: ಆಹ್ವಾನ
ರೋಣ: ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಪುರಸಭೆ ಮತ್ತು ಗ್ರಾಮವಾರು 6 ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರ ಹಾಗೂ 10 ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ಹುದ್ದೆಗಳ ಭರ್ತಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿಯನ್ನು ದ್ವಿ ಪ್ರತಿಯಲ್ಲಿ ಬೆರಳಚ್ಚು ಮಾಡಿಸಿ ಅಥವಾ ಕೈ ಬರಹದಲ್ಲಿ ಬರೆದು ಪತ್ರಾಂಕಿತ ಅಧಿಕಾರಿಗಳಿಂದ ದೃಢಿಕೃತ ನಕಲು ಪ್ರತಿಯೊಂದಿಗೆ ಆಗಸ್ಟ್ 17ರೊಳಗೆ ಸಾಯಂಕಾಲ 5.30ರೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಇಟ್ಟಿರುವ ಟೆಂಡರ್ ಪೆಟ್ಟಿಗೆಯಲ್ಲಿ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಕಚೇರಿಗೆ ಸಂಪರ್ಕಿಸಬೇಕು ಎಂದು ಸಿಡಿಪಿಓ ಕೆಂಪಹನಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರು ಪೂರ್ಣಿಮೆ ಆಚರಣೆ
ಗದಗ: ಶ್ರೀ ಸಾಯಿ ಸೇವಾ ಸಮಿತಿ ಕರುಗಲ್ ಓಣಿ, ಹಳೇ ಸರಾಫ್ ಬಜಾರನಲ್ಲಿ ಈಚೆಗೆ ಸಾಯಿ ಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು. ಕಪೋತಗಿರಿ ನಂದಿವೇರಿ ಮಠದ ಶಿವಕುಮಾರ ಶ್ರೀ ಆಧ್ಯಾತ್ಮಿಕ ಪ್ರವಚನ ನೀಡಿದರು. ಹೊನ್ನುರಪ್ಪ, ಮಹೇಶಚಂದ್ರ ಕಬಾಡರ, ವಿಶ್ವನಾಥ ಮೆಣಸಿನಕಾಯಿ, ರಾಜೇಶ ಸುಲಾಖೆ, ಸುರೇಶ ಚಿತ್ರಗಾರ, ಸಂತೋಷ ಕಬಾಡರ, ಅರುಣ ವಾಳ್ವೆಕರ, ಮಂಜು ಮಜ್ಜಿಗುಡ್ಡ, ಸುನೀಲ ಮುಳ್ಳಾಳ, ಮಹೇಶ ಕೋರಿ, ನಿತೀನ ಪುಣೇಕರ, ಮಹೇಶ ಪುಣೇಕರ, ಆದರ್ಶ ಪುಣೇಕರ ಇತರರಿದ್ದರು.