ಕಾರ್ಗಿಲ್ ಯುದ್ಧ ಸವಾಲಾಗಿತ್ತು...
ಗದಗ: ಕಾರ್ಗಿಲ್ ಯುದ್ಧ ಎನ್ನುವುದೇ ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಜಿಲ್ಲೆಯ ವಿವಿಧ ತಾಲೂಕುಗಳ ಯೋಧರಾದ ಎಸ್.ಬಿ. ನೆಲಗುಡ್ಡ, ನಾಗಪ್ಪ ಕಳಾಪುರ, ಬಾಲಪ್ಪ ರಾಠೋಡ, ಅನಿಲ ಪಾಟೀಲ, ಸಾಕಪ್ಪ ತಳವಾರ.
ಇವರು ಯುದ್ಧದ ವೃತ್ತಾಂತ ಬಿಡಿಸಿಡುತ್ತಿದ್ದರೆ ಮೈ ಜುಂ ಎನ್ನುತ್ತಿತ್ತು. ಕಾರ್ಗಿಲ್ ಸಮೀಪದಲ್ಲಿರುವ ತಂಗ್‌ದಾರ ಎನ್ನುವ ಪ್ರದೇಶದಲ್ಲಿ ನಾವು ಸೇವೆ ಮಾಡಿದ್ದು, ಅಂದು ಯುದ್ಧ ನಡೆಯುತ್ತಿದ್ದ ವೇಳೆಯಲ್ಲಿ ಕೇವಲ 5 ಡಿಗ್ರಿ ಉಷ್ಣಾಂಶ, ಅತಿಯಾದ ಶೀತಗಾಳಿ, ದೇಶದ ಅತ್ಯಂತ ಎತ್ತರ ಮತ್ತು ದುರ್ಗಮ ಪ್ರದೇಶದಲ್ಲಿಯೇ ಈ ಯುದ್ಧ ನಡೆದಿದ್ದು, ಯುದ್ಧ ಸಂದರ್ಭದಲ್ಲಿ 2 ದಿನಗಳ ಕಾಲ ನಾವೆಲ್ಲಾ ಉಪವಾಸ ಕೆಲಸ ಮಾಡಿದ್ದೇವೆ. ನಮಗೆ ಊಟ ನಮ್ಮ ಬಟಾಲಿಯನ್‌ಗಳಿಂದ ಹೆಲಿಕಾಪ್ಟರ್‌ಗಳ ಮೂಲಕವೇ ಬರಬೇಕು. ಅಲ್ಲಿಂದ ಊಟ ಬಂದಾಗಲೇ ನಮಗೆ ಆಹಾರ. ಕುಡಿಯುವ ನೀರಿಗಂತೂ ತುಂಬಾ ತೊಂದರೆ. ಕನಿಷ್ಠ 10 ಡಬ್ಬಗಳಷ್ಟು ಹಿಮ ಕರಗಿಸಿದಾಗ 1ರಿಂದ 2 ಲೀಟರ್ ನೀರು ಸಿಗುತ್ತಿತ್ತು. ಹಗಲು ವೇಳೆಗಿಂತ ರಾತ್ರಿ ವೇಳೆಯಲ್ಲಿಯೇ ಗುಂಡು, ಗ್ರಾನೈಡ್ ದಾಳಿ ನಡೆಯುತ್ತಿತ್ತು.
ಪ್ರತಿಕೂಲ ಹವಾಮಾನದ ನಡುವೆಯೂ ನಮ್ಮ ಸೈನಿಕರು ಯುದ್ಧದಲ್ಲಿ ಮುನ್ನುಗ್ಗಿದರು. ಶತ್ರು ಪಡೆಯನ್ನು ವಿನಾಶಗೊಳಿಸಬೇಕೆಂಬ ಛಲಕ್ಕೆ ಫಲ ಸಿಕ್ಕಿತು. ಗೆಲುವು ನಮ್ಮದಾಯಿತು ಎನ್ನುವಾಗ ಅವರ ಮುಖದಲ್ಲಿ ವಿಜಯದ ನಗೆ ಬೀರಿತ್ತು.