ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾರ್ಗಿಲ್ ವಿಜಯೋತ್ಸವ: ಕರಾಳ ದಿನಾಚರಣೆ

Mainashree
Updated On : 27 Jul 2013, 11:31 am

ಗದಗ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ, ಮಣಿಪುರದ ಗಡಿಯಲ್ಲಿ ಬೋಡೋ ಉಗ್ರಗಾಮಿಗಳ ಗುಂಡಿಗೆ ಬಲಿಯಾಗಿ ವೀರಮರಣ ಹೊಂದಿದ ಗದುಗಿನ ವೀರಯೋಧ ಶಂಕ್ರಯ್ಯ ಹಿರೇಮಠ ಅವರ ಪುತ್ಥಳಿಯನ್ನು ನಗರದ ಪ್ರಮುಖ ವೃತ್ತದಲ್ಲಿ ಅನಾವರಣಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ಸ್ನೇಹಲೋಕ ವಿವಿಧೋದ್ದೇಶಗಳ ಸಂಘ ಹಾಗೂ ರಾಜೀವ್ ದೀಕ್ಷಿತ್ ಪ್ರತಿಷ್ಠಾನ ಗದಗ ಇವುಗಳ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಕಪ್ಪುಬಟ್ಟೆ ಧರಿಸಿ, ಕರಾಳ ದಿನವನ್ನಾಗಿ ಆಚರಿಸಲಾಯಿತು.
1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವಿಜಯಕ್ಕೆ ಕಾರಣರಾದ ಯೋಧರಲ್ಲಿ ಒಬ್ಬರಾಗಿದ್ದ ಶಂಕ್ರಯ್ಯ ಹಿರೇಮಠ, 2001ರಲ್ಲಿ ಮಣಿಪುರದ ಗಡಿಯಲ್ಲಿ ಬೋಡೊ ಉಗ್ರಗಾಮಿಗಳ ಗುಂಡಿಗೆ ಬಲಿಯಾದರು. ಈ ಯೋಧನ ಪ್ರತಿಮೆಯನ್ನು ನಗರದ ಪ್ರಮುಖ ವೃತ್ತದಲ್ಲಿ ನಿರ್ಮಾಣ ಮಾಡಬೇಕು ಎಂದು ಈಗಾಗಲೇ ಸಂಘದ ವತಿಯಿಂದ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕಳೆದ ಜು. 24 ರಂದು ಸ್ನೇಹಲೋಕ ವಿವಿಧೋದ್ದೇಶ ಸಂಘ ಮತ್ತು ರಾಜೀವ್ ದೀಕ್ಷಿತ್ ಪ್ರತಿಷ್ಠಾನ ಸಮಿತಿಯಿಂದ ಪ್ರತಿಭಟನೆಯ ಮೂಲಕ ಪುತ್ಥಳಿ ಅನಾವರಣಕ್ಕೆ ಆಗ್ರಹಿಸಿದ್ದೆವು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜು. 26 ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸುವ ಬದಲಿಗೆ ಕರಾಳ ದಿನಾಚರಣೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ, ಜಿಲ್ಲಾಡಳಿತವು ನಮ್ಮ ಮನವಿಗೆ ಸ್ಪಂದಿಸದೇ ಇರುವುದು ನೋವಿನ ಸಂಗತಿಯಾಗಿದೆ.
ಒಬ್ಬ ವೀರಯೋಧನಿಗೆ ನಮನ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ. ಅಲ್ಲದೇ ವೀರಯೋಧನ ಸವಿನೆನಪಿಗಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಪುತ್ಥಳಿ ಅನಾವರಣಗೊಳಿಸಬೇಕಿದೆ. ಆದರೆ, ಜಿಲ್ಲಾಡಳಿತ ಈ ಕುರಿತು ಕ್ರಮ ಕೈಗೊಳ್ಳದೇ ಇರುವುದು ಅತ್ಯಂತ ನೋವಿನ ಸಂಗತಿ. ಕಾರಣ ಆಗಸ್ಟ್ 15 ರೊಳಗೆ ವೀರಯೋಧ ಶಂಕ್ರಯ್ಯ ಹಿರೇಮಠ ಪುತ್ಥಳಿ ಅನಾವರಣಗೊಳಿಸಿ. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
ಸ್ನೇಹಲೋಕ ವಿವಿಧೋದ್ದೇಶ ಸಂಘದ ಅಧ್ಯಕ್ಷ ಬಸವರಾಜ ಆರಟ್ಟಿ, ರಾಜೀವ್ ದೀಕ್ಷಿತ್ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ನೀಲಪ್ಪಗೌಡ ದಾನಪ್ಪಗೌಡ್ರ, ಶ್ಯಾಮ ಜೈನರ್, ರವಿ ಮಡಿವಾಳರ, ಬಸವರಾಜ ನಂದಿಕೋಲ, ರವಿ ಶಿದ್ಲಿಂಗ್, ಸಿದ್ದು ಗುಮ್ಮಗೊಳಮಠ, ರವಿ ಚನಿವಾಲರ, ಶಿವಯ್ಯ ಹಿರೇಮಠ, ಮಂಜುನಾಥ ಮಡಿವಾಳರ, ಸಿದ್ಧು ಚಳ್ಳಮರದ, ವೀರಯ್ಯ ಹಿರೇಮಠ, ವಿಶ್ವನಾಥ ಶೀರಿ, ಅಶೋಕ ಬಾಂಡಗೆ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement