ನರಗುಂದ ಬಂಡಾಯಕ್ಕೆ ದೊರೆತ ಮಾನ್ಯತೆ ಸೊರಟೂರಿಗಿಲ್ಲ
ಶಿರಹಟ್ಟಿ: ನರಗುಂದ ರೈತ ಬಂಡಾಯದ ನಂತರ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಡವರ ಬಗ್ಗೆ ಧ್ವನಿ ಮೊಳಗಿದ್ದೇ ಗದಗ ಜಿಲ್ಲೆಯ ಸೊರಟೂರಿನಲ್ಲಿ.
ಬಗರ್ ಹುಕುಂ ಸಾಗುವಳಿ ಭೂಮಿಗಾಗಿ ನಡೆದ ಹೋರಾಟದಲ್ಲಿ ಗೋಲಿಬಾರ್ ನಡೆದು ರೈತರು ತಮ್ಮ ಪ್ರಾಣ ತೆತ್ತರು. ಆದರೆ, ನರಗುಂದ ರೈತ ಬಂಡಾಯಕ್ಕೆ ದೊರೆತಷ್ಟು ಮಾನ್ಯತೆ, ಪ್ರಚಾರ, ಈ ಗೋಲಿಬಾರ್ನಲ್ಲಿ ಜೀವ ಕಳೆದುಕೊಂಡ ರೈತರಿಗೆ ಸಿಗದಿರುವುದು ಮಾತ್ರ ದುರದೃಷ್ಟಕರ. ಒಂದೇ ತಿಂಗಳಲ್ಲಿ ಎರಡು ರೈತ ಹುತಾತ್ಮ ದಿನ ಬರುತ್ತವೆ. ಒಂದು ಜು. 21 ರಂದು ರಾಜ್ಯಾದ್ಯಂತ ಹೆಸರುವಾಸಿಯಾದ ನರಗುಂದ ರೈತ ಬಂಡಾಯ. ಇನ್ನೊಂದು ಜು. 27 ಸೊರಟೂರಿನ ರೈತ ಹುತಾತ್ಮ ದಿನ.
ಹಿನ್ನೆಲೆ: 23 ವರ್ಷಗಳ ಹಿಂದೆ ಸಮೀಪದ ಸೊರಟೂರ ಗ್ರಾಮದಲ್ಲಿ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ, ರಣತೂರ ಗ್ರಾಮದ ರೈತರು ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಬಗರಹುಕುಂ ಚಳವಳಿ ಆರಂಭಿಸಿದರು. ರೈತರ ಹೋರಾಟ ಹತ್ತಿಕ್ಕಲು ಅಂದಿನ ಸರ್ಕಾರ ಅನ್ನದಾತರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಅದು ಬಗರಹುಕುಂ ಚಳವಳಿ ಎಂದು ಇಂದಿಗೂ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಗುಂಡಿನ ದಾಳಿಯಲ್ಲಿ ಮೂವರು ಮೃತರಾಗಿದ್ದಾರೆ.
ಉಪಜೀವನಕ್ಕಾಗಿ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಾ ಬಂದಿದ್ದ ರೈತರು, ಆ ಭೂಮಿಯನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ನಡೆಸಿದ ಬಗರ್ಹುಕುಂ ಚಳವಳಿ ವಿಕೋಪಕ್ಕೆ ಹೋಗಿ 1990 ಜು. 27 ರಂದು ರೈತರು, ಅಧಿಕಾರಿಗಳ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ನಡೆದ ಗೋಲಿಬಾರ್ನಲ್ಲಿ ಸೊರಟೂರಿನ ಮಹಾಲಿಂಗಪ್ಪ ಗಿಡಕೆಂಚಣ್ಣವರ, ಜಲ್ಲಿಗೇರಿಯ ದೇವಪ್ಪ ದುರಗಪ್ಪ ಲಮಾಣಿ, ರಣತೂರಿನ ಚನ್ನವೀರಪ್ಪ ಚನ್ನಪ್ಪ ನಿರ್ವಾಣಿಶೆಟ್ಟರ ಜೀವ ಕಳೆದುಕೊಂಡರು.
ಪರಿಹಾರ ನೀಡಿಲ್ಲ: ಅಂದು ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡೆವು. ಆಗ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವರು ಮಕ್ಕಳಿಗೆ ಸರ್ಕಾರಿ ನೌಕರಿ ಹಾಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. 23 ವರ್ಷ ಕಳೆದರೂ ಯಾವುದೇ ಪರಿಹಾರವೂ ಇಲ್ಲ. ಇದ್ದ ಹೆಣ್ಣು ಮಕ್ಕಳಿಗೆ ನೌಕರಿಯನ್ನು ನೀಡಿಲ್ಲ. 8 ತಿಂಗಳಿಂದ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು, ಸರಿಯಾದ ಆರೈಕೆ ಇಲ್ಲದೆ ಸಾವು ಬದುಕಿನೊಂದಿಗೆ ಕಾಲ ಕಳೆಯುತ್ತಿರುವುದಾಗಿ ಸೊರಟೂರ ಗ್ರಾಮದ ಮೃತ ರೈತ ಮಹಾಲಿಂಗಪ್ಪನ ತಂದೆ ಮಲ್ಲೇಶಪ್ಪ ವೀರಪ್ಪ ಗಿಡಕೆಂಚಣ್ಣವರ ತಮ್ಮ ಅಳಲು ತೋಡಿಕೊಂಡರು.
ಇನ್ನಾದರೂ ಸಿಕ್ಕೀತೆ ?: ಪ್ರತಿ ವರ್ಷವೂ ರೈತ ಮುಖಂಡರೇ ರೈತ ಹುತಾತ್ಮ ದಿನ ಆಚರಣೆ ಮಾಡುತ್ತಾರೆ. ಯಾವ ಜನಪ್ರತಿನಿಧಿಗಳು ಬರುವುದಿಲ್ಲ. 23 ವರ್ಷಗಳ ಹಿಂದೆ ಕೇವಲ ರು. 23 ಸಾವಿರ ಪರಿಹಾರ ನೀಡಿದ್ದನ್ನು ಬಿಟ್ಟರೆ ಸರ್ಕಾರ ಮತ್ತೆ ಯಾವುದೇ ಸಹಾಯ ಮಾಡಿಲ್ಲ. ಜನಪ್ರತಿನಿಧಿಗಳು ಸೊರಟೂರ ಗ್ರಾಮದ ರೈತ ಹುತಾತ್ಮ ದಿನವನ್ನು ಮರೆತಿದ್ದಾರೆ. ಹುತಾತ್ಮ ರೈತನ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ. ಇನ್ನಾದರೂ ಸರ್ಕಾರ ಪರಿಹಾರ ನೀಡುವುದೇ ಎಂಬ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿದ್ದೇವೆ ಎಂದು ಜಲ್ಲಿಗೇರಿ ಗ್ರಾಮದ ಹುತಾತ್ಮ ರೈತನ ತಂದೆ ದುರಗಪ್ಪ ಲಮಾಣಿಯವರು ನೊಂದು ನುಡಿಯುತ್ತಾರೆ.
ನಮಗ್ಯಾಕೆ ಅನ್ಯಾಯ ?: ನರಗುಂದ ರೈತ ಬಂಡಾಯ ಹಾಗೂ ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ನಲ್ಲಿ ಮಡಿದವರಿಗೆ ಸರ್ಕಾರ ಲಕ್ಷಾಂತರ ಪರಿಹಾರ ನೀಡುವ ಜತೆಗೆ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಿದೆ. ಸೊರಟೂರ ಗ್ರಾಮದಲ್ಲಿ ಮಡಿದ ಮೂವರು ರೈತರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡದಿರುವುದು ಸರ್ಕಾರದ ತಾರತಮ್ಯ ತೋರಿಸುತ್ತಿದೆ. ಈಗಲಾದರೂ ಇತ್ತ ಗಮನ ಹರಿಸಿ ಪರಿಹಾರ ನೀಡಬೇಕು ಎಂದು ರಣತೂರ ಗ್ರಾಮದ ಹುತಾತ್ಮ ರೈತನ ಸಹೋದರ ವಿರೂಪಾಕ್ಷಪ್ಪ ನಿರ್ವಾಣಿಶೆಟ್ಟರ್ ಸರ್ಕಾರಕ್ಕೆ ಒತ್ತಾಯಿಸಿದರು.
ಹುಸಿಯಾದ ಸಚಿವರ ಭರವಸೆ
ಬಗರ್ಹುಕುಂ ಚಳವಳಿಯಲ್ಲಿ ಪ್ರಾಣತೆತ್ತ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲು 23 ವರ್ಷಗಳಿಂದ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಹೋರಾಟದಲ್ಲಿ ಮಡಿದ ರೈತರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಲು ಪ್ರಯತ್ನಿಸುವುದಾಗಿ ಅಂದಿನ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ 23 ವರ್ಷ ಕಳೆದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಪ್ರತಿ ವರ್ಷ ಆಚರಿಸುವ ರೈತ ಹುತಾತ್ಮ ದಿನದಂದು ಈ ಗ್ರಾಮಗಳಿಗೆ ಯಾವುದೇ ಪಕ್ಷದ ಮುಖಂಡರು ಬರುವುದಿಲ್ಲ. ಈ ದಿನಾಚರಣೆ ರೈತರಿಗೆ ಮಾತ್ರ ಸೀಮಿತವಾಗಿದೆ ಎಂದು ಗ್ರಾಮದ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಹದೇವಪ್ಪ ಎಂ. ಸ್ವಾಮಿ