ಬಸ್ ನಿಲ್ದಾಣದಲ್ಲಿ ಹೆಚ್ಚಿದ ವಾಹನ ಕಳ್ಳತನ
ಗದಗ: ನಗರದಲ್ಲಿರುವ ನೂತನ ಬಸ್ ನಿಲ್ದಾಣದ ಅವ್ಯವಸ್ಥೆ ಎಲ್ಲರಿಗೂ ತಿಳಿದ ವಿಷಯವೇ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಬೇಸರ ವ್ಯಕ್ತಪಡಿಸಿದ್ದೂ ಆಗಿದೆ. ಅದಕ್ಕೆ ಮತ್ತೊಂದು ಸೇರ್ಪಡೆ ಎನ್ನುವ ರೀತಿಯಲ್ಲಿ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಿ ಬೇರೆ ಬೇರೆ ಊರುಗಳಿಗೆ ಕೆಲಸಕ್ಕೆ ತೆರಳುವ ನೌಕರರು, ಕಾರ್ಮಿಕರು ಸೇರಿದಂತೆ ಹಲವಾರು ಜನರ ವಾಹನಗಳು, ಸೈಕಲ್ಗಳು ನಿತ್ಯ ಕಳ್ಳತನವಾಗುತ್ತಿದ್ದು, ಇದು ಜನರಲ್ಲಿ ಆತಂಕ ತಂದಿದೆ.
ಹೊಸ ಬಸ್ ನಿಲ್ದಾಣದಿಂದ ನಿತ್ಯ 581 ಬಸ್ಗಳು ಪ್ರಯಾಣ ಬೆಳೆಸುತ್ತವೆ. ಮತ್ತು ಇಲ್ಲಿಗೆ ಆಗಮಿಸುತ್ತವೆ. ಇಷ್ಟೊಂದು ಪ್ರಮಾಣದ ಜನದಟ್ಟಣೆ ಇರುವ ಈ ಬಸ್ ನಿಲ್ದಾಣಕ್ಕೆ ತಮ್ಮ ಸಂಬಂಧಿಗಳನ್ನು ಕರೆದೊಯ್ಯಲು, ಮತ್ತು ನಿಲ್ದಾಣಕ್ಕೆ ತಂದು ಬಿಡಲು ನಿತ್ಯವೂ ಸಾವಿರಾರು ಸಂಖ್ಯೆಯ ಸಾರ್ವಜನಿಕರು ತಮ್ಮ ವಾಹನಗಳೊಂದಿಗೆ ಆಗಮಿಸುತ್ತಾರೆ. ಇನ್ನು ಗದಗನಿಂದ ಹಲವಾರು ಜನರು ಕೆಲಸ ಅರಸಿ ಬೇರೆಡೆ ಹೋಗುವುದರಿಂದ ಮನೆಯಿಂದ ವಾಹನಗಳನ್ನು ತಂದು ನಿಲ್ದಾಣದಲ್ಲಿ ನಿಲುಗುಡೆ ಮಾಡಿ ಹೋಗುತ್ತಾರೆ. ಇದನ್ನೇ ಕಾಯುವ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಇಲ್ಲಿಯವರೆಗೂ 13 ಬೈಕ್ ಕಳ್ಳತನವಾಗಿದ್ದು ಕೇವಲ 2 ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಸೈಕಲ್ ಕಳ್ಳತನ ಹೆಚ್ಚು: ಹೆಚ್ಚು ಕಳ್ಳತನ ನಡೆಯುತ್ತಿರುವುದು ಸೈಕಲ್ಗಳದ್ದು, ಹೊಸ ಬಸ್ ನಿಲ್ದಾಣ ನಗರದಿಂದ ದೂರದಲ್ಲಿರುವುದರಿಂದ ಪ್ರತಿ ದಿನವೂ ಆಟೋಗಳಿಗೆ ಹಣ ನೀಡಲಾಗದ ಬಡ, ಮಧ್ಯಮ ವರ್ಗದವರು ತಮ್ಮ ಬಜೆಟ್ಗೆ ತಕ್ಕಂತೆ ಸೈಕಲ್ಗಳನ್ನು ಖರೀದಿಸಿ, ಬಳಕೆ ಮಾಡುತ್ತಾರೆ. ನಿಲ್ದಾಣದ ಆವರಣಕ್ಕೆ ಸೈಕಲ್ಗಳು ನಿಂತರೆ ಸಾಕು, ಕ್ಷಣಾರ್ಧದಲ್ಲಿಯೇ ಅವುಗಳನ್ನು ಮಾಯ ಮಾಡುತ್ತಾರೆ. ಕೇವಲ ಸೈಕಲ್ ಮಾತ್ರವಲ್ಲ, ಹಲವು ಬಾರಿ ಸಾರ್ವಜನಿಕರ ವಸ್ತುಗಳು ಇಲ್ಲಿ ಕಳ್ಳತನವಾದ ಬಗ್ಗೆ ವರದಿಯಾಗಿದೆ.
ಪೆಟ್ರೋಲ್ ಕಳ್ಳರು: ಮೊದಲು ಬೈಕ್ಗಳ ಕಳ್ಳತನವೇ ಜೋರಾಗಿ ನಡೆಯುತ್ತಿತ್ತು. ಆದರೆ, ಈಚೆಗೆ ಜಾಣತನ ಉಪಯೋಗಿಸುತ್ತಿರುವ ಕಳ್ಳರು, ನಿಲ್ಲಿಸಿರುವ ಬೈಕ್ಗಳಲ್ಲಿನ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದಾರೆ. ತಡರಾತ್ರಿ ಬೇರೆ ಊರುಗಳಿಂದ ಬರುವ ಬೈಕ್ ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ನಿಲ್ದಾಣದ ಆವರಣದಲ್ಲಿ ಒಂದು ಸುತ್ತು ಹಾಕಿದರೆ ಪೆಟ್ರೋಲ್ ಕದಿಯಲು ಬೇಕಾಗುವ ಸಲಾಯನ್ ಪೈಪ್ಗಳು ಬಿದ್ದಿರುವುದು ಕಂಡು ಬರುತ್ತದೆ.
ನಿಲುಗಡೆ ವ್ಯವಸ್ಥೆಯೇ ಇಲ್ಲ
ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಈ ಬಸ್ ನಿಲ್ದಾಣ ಉದ್ಘಾಟನೆಗೊಂಡು 5 ವರ್ಷ ಗತಿಸಿದ್ದರೂ, ನಿಲ್ದಾಣದ ಆವರಣದಲ್ಲಿ ವಾಹನ ನಿಲುಗಡೆಯ ಸ್ಥಳವನ್ನೇ ನಿಗದಿಮಾಡಿಲ್ಲ. ಹಾಗಾಗಿ ವಾಹನ ನಿಲುಗಡೆಯಿಂದ ರಸ್ತೆ ಸಾರಿಗೆ ಸಂಸ್ಥೆಗೆ ಬರಬೇಕಾದ ಸಾಕಷ್ಟು ಆದಾಯವೂ ಕೈತಪ್ಪಿ ಹೋಗಿದೆ. ಒಂದೆಡೆ ಸಂಸ್ಥೆಗೆ ನಷ್ಟ, ಇನ್ನೊಂದೆಡೆ ವಾಹನ ನಿಲುಗಡೆ ಮಾಡಿದವರಿಗೆ ಕಳೆದುಕೊಳ್ಳುವ ಭಯ. ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ.
ವಾಹನ ನಿಲುಗಡೆಗೆ ವ್ಯವಸ್ಥೆ
ನಮ್ಮ ನೂತನ ನಿಲ್ದಾಣದಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅದಕ್ಕಾಗಿ ಸಂಸ್ಥೆಯಿಂದ ಯಾರಿಗೂ ಟೆಂಡರ್ ನೀಡಿಲ್ಲ. ಸಾರ್ವಜನಿಕರು ನಿಗದಿತ ಸ್ಥಳವಿಲ್ಲದೇ ಇರುವುದರಿಂದ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದ್ದು ಸಮಸ್ಯೆಗೆ ಕಾರಣವಾಗಿದೆ. ಸದ್ಯದಲ್ಲಿಯೇ ನೂತನ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಸ್ಥಳ ಕಲ್ಪಿಸಲಾಗುವುದು.
- ಬಿ.ಎನ್. ಗದ್ದಿಕೇರಿ, ಕರಾರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ, ಗದಗ
ಶಿವಕುಮಾರ ಕುಷ್ಟಗಿ