ಸುದ್ದಿ ಸಂಕ್ಷೇಪ
ದೊಡ್ಡಮನಿ ಆಯ್ಕೆ
ರೋಣ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕೃಷಿ ಇಲಾಖೆಯ ಶಿವಪುತ್ರಪ್ಪ ದೊಡ್ಡಮನಿ ಅವಿರೋಧವಾಗಿ ಆಯ್ಕೆಯಾದರು. ಖಜಾಂಚಿಯಾಗಿ ಎಮ್.ಸಿ. ಹಿರೇಮಠ, ರಾಜ್ಯ ಪರಿಷತ್ ಸ್ಥಾನಕ್ಕೆ ಆರ್.ಎಲ್. ರಡ್ಡೇರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದ್ದು ವಿಶೇಷವಾಗಿತ್ತು. ಚುನಾವಣಾ ಅಧಿಕಾರಿಯಾಗಿ ರಮಾಕಾಂತ ಕಮತಗಿ ಕಾರ್ಯ ನಿರ್ವಹಿಸಿದರು.
ಐಟಿಐ ಪರೀಕ್ಷೆಯಲ್ಲಿ ಸಾಮೂಹಿಕ ನಕಲು
ಗದಗ: ನಗರದ ಸಿದ್ಧಪ್ಪ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಮೇಲ್ವಿಚಾರಕರ ಸಮ್ಮುಖದಲ್ಲೇ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡುತ್ತಿದ್ದ ದೃಶ್ಯ ಶುಕ್ರವಾರ ಕಂಡುಬಂದಿದೆ. ನಕಲು ಮಾಡುತ್ತಿರುವುದನ್ನು ನೋಡಿಯೂ ಸುಮ್ಮನೇ ಇದ್ದ ಮೇಲ್ವಿಚಾರಕರ ವರ್ತನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೆಲ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡಿಕೊಂಡು ಹೈಟೆಕ್ ಕಾಪಿ ಮಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಡಿಪಿಯು ಬಿ.ಎಸ್. ಗೌಡರ ಭೇಟಿ ನೀಡಿ ಮಾತನಾಡಿ, ಕಾಪಿ ನಡೆದಿದ್ದು ತಿಳಿದುಬಂದಿದೆ. ಸಾಬೀತಾದಲ್ಲಿ ಪರೀಕ್ಷೆ ಕೇಂದ್ರದ ರದ್ದತಿಗೆ ಶಿಪಾರಸು ಮಾಡಲಾಗುವುದು ಎಂದರು.
ಅಪಘಾತ: ಸವಾರ ಸಾವು
ನರಗುಂದ: ನವಲಗುಂದ-ನರಗುಂದ ಮಧ್ಯೆ ಹೆದ್ದಾರಿಯಲ್ಲಿ ಬೈಕ್ ಹಾಗೂ ಅಪರಿಚಿತ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಮೃತನನ್ನು ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ನಿವಾಸಿ ನಾಗಪ್ಪ ಶಿಂಧೆ (42) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಇನ್ನೋರ್ವ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ತಗುಲಿ ಸಾವು
ಮುಂಡರಗಿ: ತಾಲೂಕಿನ ಹಾರೋಗೇರಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ತಂತಿಬೇಲಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ಜರುಗಿದೆ. ಗ್ರಾಮದ ಮಹ್ಮದಸಾಬ ಪೀರಸಾಬ ಬನ್ನಿಕೊಪ್ಪ (38) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಂದು ಬಾನುಲಿಯಲ್ಲಿ ಕೋಟೆಶಾಲೆ ಮಕ್ಕಳ ಕಾರ್ಯಕ್ರಮ
ಮುಂಡರಗಿ: ಜು. 27, 28ರಂದು ಧಾರವಾಡ ಆಕಾಶವಾಣಿ ಕೇಂದ್ರ ಬಿತ್ತರಿಸುವ ಶನಿವಾರದ ಎಳೆಯರ ಬಳಗ, ಭಾನುವಾರ ಪ್ರಸಾರಗೊಳ್ಳುವ ಗಿಳಿವಿಂಡು ಕಾರ್ಯಕ್ರಮದಲ್ಲಿ ಮುಂಡರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಮಕ್ಕಳ ಕೂಟದ ಮಕ್ಕಳು ಪ್ರಸ್ತುತಪಡಿಸಿದ ವೈವಿದ್ಯಮಯ ಕಾರ್ಯಕ್ರಮ ಬಿತ್ತರವಾಗಲಿದೆ. ಬಳಗ ಜು. 27ರ ಮಧ್ಯಾಹ್ನ 2.35ಕ್ಕೆ ಎಳೆಯರ, 28ರ ಬೆಳಗ್ಗೆ 9ಕ್ಕೆ ಗಿಳಿವಿಂಡು ಕಾರ್ಯಕ್ರಮ ಪ್ರಸಾರವಾಗಲಿವೆ. ಡಾ. ನಿಂಗು ಸೊಲಗಿ ಸಂಯೋಜನೆಯಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ದಶರಥ ಕುರಿ, ಮುಖ್ಯ ಶಿಕ್ಷಕ ಎಸ್.ಎಸ್. ನಂಜನಗೂಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉಪನ್ಯಾಸ ಕಾರ್ಯಕ್ರಮ
ಗದಗ: ತಾಪಂ ಆವರಣದ ಜಿಲ್ಲಾ ಕಸಾಪ ನೇತೃತ್ವದಲ್ಲಿ ಜು. 27ರಂದು ಸಂಜೆ 6ಕ್ಕೆ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಜ. ತೋಂಟದಾರ್ಯ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜೆ.ಎಂ. ರೇವಡಿಹಾಳ ಗದಗಿನ ಪರಂಪರೆ ಕುರಿತು ಉಪನ್ಯಾಸ ನೀಡುವರು. ಸಾಹಿತಿ ರಾಜಶೇಖರಯ್ಯ ಕಾಲವಾಡಮಠ ಕಾವ್ಯವಾಚಿಸುವರು.ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಣ್ಣ ಕುರಿ ಅಧ್ಯಕ್ಷತೆ ವಹಿಸುವರು. ಕಸಾಪ ಅಜೀವ ಸದಸ್ಯರು, ಸಾಹಿತ್ಯಾಭಿಮಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಿ.ಎಚ್. ಮಲ್ಲೇಶ, ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.