ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಪಾಯಕ್ಕೆ ಆಹ್ವಾನ..!

Mainashree
Updated On : 28 Jul 2013, 1:16 am

 ಶಿವಕುಮಾರ ಕುಷ್ಟಗಿ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಆಟೋ(ಟಂಟಂ)ಗಳು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಪ್ರಮುಖ ಸಾರಿಗೆ ಸಾಧನಗಳಾಗಿವೆ. ಒಂದೇ ಆಟೋನಲ್ಲಿ 10ಕ್ಕೂ ಹೆಚ್ಚು ಮಕ್ಕಳನ್ನು ಕುಳ್ಳರಿಸಿಕೊಂಡು ಹೋಗುವುದು ಸಾಮಾನ್ಯ. ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ಹೊತ್ತಿರುವ ಆರ್‌ಟಿಓ ಇಲಾಖೆ ಮಾತ್ರ ಯಾರಿಗೇನಾದ್ರೂ ನಮಗೇನು ಎಂದು ಕಣ್ಮುಚ್ಚಿ ಕುಳಿತಿದೆ...!
ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಆಟೋಗಳಲ್ಲಿ ಚಾಲಕ ಎಲ್ಲಿದ್ದಾನೆ ಎನ್ನುವುದನ್ನು ಹುಡುಕುವ ರೀತಿಯಲ್ಲಿ ಮಕ್ಕಳನ್ನು ಕುಳ್ಳರಿಸಿಕೊಳ್ಳುತ್ತಾರೆ. ಇದರಿಂದ ವಾಹನ ನಡೆಸಲು ತೊಂದರೆಯಾದರೂ ಹಣದ ಆಸೆಗಾಗಿ ಹೆಚ್ಚೆಚ್ಚು ಮಕ್ಕಳನ್ನು ಕುಳ್ಳರಿಸಿಕೊಳ್ಳುತ್ತಾರೆ. ಇನ್ನು ಅವಳಿ ನಗರದ ಪ್ರಮುಖ ರಸ್ತೆಗಳ ಸ್ಥಿತಿ ಅಯೋವುಯವಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ರೋಡ್ ಬ್ರೇಕ್ ಹಾಕಲಾಗಿದೆ. ಇದು ತೊಂದರೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.
ನಿಯಮ ಉಲ್ಲಂಘನೆ: ಒಂದು ಆಟೋದಲ್ಲಿ ನಾಲ್ಕರಿಂದ ಆರು ಮಕ್ಕಳನ್ನು ಹಾಕಬಹುದು. ಇದು ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಯೇ ರೂಪಿಸಿರುವ ನಿಯಮ. ಆದರೆ, ಈ ಎಲ್ಲ ನಿಯಮ ಅವಳಿ ನಗರದಲ್ಲಿ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಪ್ರತಿ ಸರ್ಕಲ್‌ಗಳಲ್ಲಿಯೂ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಇದ್ದರೂ ಅವರ ಸಮ್ಮುಖದಲ್ಲಿಯೇ ಒಂದೇ ಆಟೋದಲ್ಲಿ 10ಕ್ಕಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯುವುದು ಸಾಮಾನ್ಯವಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿಯೇ ಸಾರಿಗೆ ನಿಯಮ ಉಲ್ಲಂಘನೆಯಾಗುತ್ತಿದೆ.
ಎಲ್ಲರ ಜವಾಬ್ದಾರಿ ಇದೆ: ಇದು ಕೇವಲ ಆಟೋ ಅಥವಾ ಟಂಟಂ ಚಾಲಕರ ಲೋಪ ಮಾತ್ರವಲ್ಲ. ಮುಖ್ಯವಾಗಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಿದೆ. ಹಣ ಕಡಿಮೆಯಾಗುತ್ತದೆ ಎಂಬ ದುರಾಸೆಯಿಂದ ಹೆಚ್ಚಿನ ಮಕ್ಕಳಿರುವ ಆಟೋಗಳಲ್ಲಿ ತಮ್ಮ ಮಕ್ಕಳನ್ನು ಕಳಿಸಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇನ್ನು ಶಾಲೆ ಆಡಳಿತ ಮಂಡಳಿ ಈ ವಿಷಯದತ್ತ ಹೆಚ್ಚಿನ ಗಮನ ಹರಿಸಿ, ಅತಿಯಾದ ಸಂಖ್ಯೆಯಲ್ಲಿ ಮಕ್ಕಳನ್ನು ಕರೆತರುವ ಚಾಲಕರಿಗೆ ತಿಳಿವಳಿಕೆ ನೀಡಬೇಕಿದೆ. ಒಟ್ಟಿನಲ್ಲಿ ಇದು ಕೇವಲ ಚಾಲಕರ ಕರ್ತವ್ಯವಲ್ಲ. ಇದರಲ್ಲಿ ಎಲ್ಲರ ಜವಾಬ್ದಾರಿ ಅಡಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement