ಕಾಲುವೆ ದುರಸ್ತಿಗೆ ರು. 37 ಕೋಟಿ ಪ್ರಸ್ತಾವನೆ: ಜಿಎಸ್ಪಿ
ರೋಣ: ರೈತರು ನೀರಾವರಿಯಿಂದ ಸಮಗ್ರ ಕೃಷಿಗಾಗಿ ನಿರ್ಮಿಸಿದ ತಾಲೂಕಿನಲ್ಲಿನ ನೀರಾವರಿ ಕಾಲುವೆಗಳಲ್ಲಿ ಜಾಲಿ ಕಂಟಿ, ಹೂಳುಗಳಿಂದ ತುಂಬಿದ್ದು, ಕಾಲುವೆಗಳ ದುರಸ್ತಿಗೆ ರು. 37 ಕೋಟಿ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನೀರಾವರಿ ಇಲಾಖೆಯ ಗುತ್ತಿಗೆದಾರರ ಸಂಘ ಮತ್ತು ಅಬಕಾರಿ ಗುತ್ತಿಗೆದಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಲಪ್ರಭಾ ಕಾಲುವೆಗಳ ಮೂಲಕ ಈ ಭಾಗದ ರೈತ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 20 ವರ್ಷಗಳ ಹಿಂದೆ ಕಾಲುವೆ ನಿರ್ಮಿಸಲಾಗಿದೆ. ಅವುಗಳ ಸಂಪೂರ್ಣ ಹದಗೆಟ್ಟಿದ್ದು, ನೀರು ಹರಿದು ಬರಲು ಅಸಾಧ್ಯವಾಗಿದೆ. ಆದ್ದರಿಂದ ಇಂದಿನ ಸ್ಥಿತಿಗೆ ಅನುಗುಣವಾಗಿ ವೈಜ್ಞಾನಿಕ ರೀತಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಸಂಪೂರ್ಣ ದುರಸ್ತಿಗೆ ರು. 37 ಕೋಟಿ ಸೇರಿದಂತೆ ಇನ್ನೂಳಿದ ಸಣ್ಣ ಪುಟ್ಟ ಕಾಮಗಾರಿಗಳಿಗಾಗಿ ರು. 10 ರಿಂದ 12 ಕೋಟಿ ಅಗತ್ಯವಿದ್ದು, ಇದಕ್ಕೂ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲಿ ಮಂಜೂರಾತಿ ಸಿಗಲಿದೆ ಎಂದರು.
ನೀರಾವರಿ ಗುತ್ತಿಗೆದಾರ ಸಂಘದ ಅಧ್ಯಕ್ಷ ತೋಟಪ್ಪ ನವಲಗುಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ಕೆ.ಸಿ. ಪಾಟೀಲ ಮಾತನಾಡಿದರು. ರಾಜ್ಯ ಬೀಜ ನಿಗಮ ನಿರ್ದೇಶಕ ಐ.ಎಸ್. ಪಾಟೀಲ, ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡಿ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಜಗದೀಶಪ್ಪ ಹುಗ್ಗಿ, ಪುರಸಭೆ ಸದಸ್ಯ ಮುತ್ತಣ್ಣ ಸಂಗಳದ, ವಿ.ಜಿ. ಜಾವೂರಮಠ, ವಿ.ಜಿ. ಕೊಣ್ಣೂರ, ವಿ.ವೈ. ಶಿರೋಳ, ರಾಜಣ್ಣ ಹುಲಿ, ಆರ್.ಬಿ. ರಡ್ಡೇರ, ಎಸ್.ವಿ. ಮುಗಳಿ, ಜಿ.ವಿ. ಹಿರೇಮಠ, ಐ.ವಿ. ಕೊಪ್ಪದ, ಮಾಳಪ್ಪ ಹಾಳಕೇರಿ, ಶಿವಲಿಂಗಪ್ಪ ಗೋಟುರ, ವಿಶಾಲ ಕರಡಿ ಮುಂತಾದವರು ಇದ್ದರು. ರಾಜಣ್ಣ ಗಿರಡ್ಡಿ ನಿರೂಪಿಸಿದರು.