ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೈವ ಸಿದ್ಧಾಂತದ ಕೊನೆ ಘಟ್ಟ ಇಷ್ಟಲಿಂಗ

Mainashree
Updated On : 28 Jul 2013, 1:16 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 27
ಭಾರತ ಸಂಸ್ಕೃತಿಯಲ್ಲಿ ಶೈವ ಸಂಸ್ಕೃತಿ ಮುಖ್ಯಪಾತ್ರ ವಹಿಸುತ್ತದೆ. ಶೈವ, ವೈಷ್ಣವ, ಜೈನ ಇವು ಭಾರತೀಯ ಸಂಸ್ಕೃತಿಯನ್ನು ಬೆಳೆಸಿದವುಗಳು. ಅದರಲ್ಲಿ ಶೈವ ಸಂಸ್ಕೃತಿ ಅಂದರೆ ಶಿವನಪೂಜೆ ಮಾಡುವುದು. ಇದು ಮಾತೃ ಪ್ರಧಾನವಾದ ಸಂಸ್ಕೃತಿ. ಶೈವ ಸಿದ್ಧಾಂತದ ಕೊನೆ ಘಟ್ಟ ಇಷ್ಟಲಿಂಗ, ಲಿಂಗಾಯತ ಧರ್ಮ ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ಅವರು ಶುಕ್ರವಾರ ರಾತ್ರಿ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ತಿಂಗಳ ಕಾಲ ಜರುಗುತ್ತಿರುವ ವಚನ ಸಂಸ್ಕೃತಿ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರ ಪ್ರಕಾರ ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ. ಎನ್ನಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನಕಳಸವಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿಗಿಲ್ಲ. ಜಂಗಮ ಎಂದರೆ ಬರೀ ಸ್ವಾಮೀಜಿಗಳು ಮಾತ್ರವಲ್ಲ, ಜಂಗಮ ಎಂದರೆ ಸಮಾಜ, ಜಂಗಮ ಎಂದರೆ ಜ್ಞಾನ, ಜಂಗಮ ಎಂದರೆ ಜನ ಎಂದು ಅರ್ಥ. ಆದ್ದರಿಂದ ಬಸವಣ್ಣನವರು ದೇಹವನ್ನೇ ದೇವಾಲಯಕ್ಕೆ ಹೋಲಿಸಿದ್ದಾರೆ.
ಶಿವಧೈರಕ್ಕೆ ಮೈಲಿಗೆ ಇಲ್ಲ: ಲಿಂಗಾಯತರಿಗೆ ಇಷ್ಟಲಿಂಗೋಪಾಸನೆ ಅವಶ್ಯ. ಯಾವುದೇ ಜನಾಂಗದವರು ಲಿಂಗಧರಿಸಿದರೂ ಅವರು ತಾತ್ವಿಕವಾಗಿ ಲಿಂಗಾಯತರೇ. ಇಷ್ಟಲಿಂಗವನ್ನು ಪೂಜಿಸುವವರು ಬೇರೆ ಯಾವುದೇ ದೇವರನ್ನು ಪೂಜಿಸುವ ಆವಶ್ಯಕತೆ ಇಲ್ಲ. ಲಿಂಗಾಯತ ಧರ್ಮದಲ್ಲಿ ಹೆಣ್ಣು-ಗಂಡೆಂಬ ಭೇದ ವಿಲ್ಲ. ಲಿಂಗಾಯತ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ಸಮಾನವಾಗಿ ಗ್ರಹಿಸಲಾಗುತ್ತಿದೆ. ಲಿಂಗಾಯತ ಧರ್ಮದಲ್ಲಿ ಮಹಿಳೆಗೆ ಲಿಂಗಪೂಜೆ ಮಾಡುವ ಹಕ್ಕಿದೆ. ಜನಿವಾರಕ್ಕೆ ಮೈಲಿಗೆ ಇದೆ. ಆದರೆ ಶಿವಧಾರಕ್ಕೆ ಮೈಲಿಗೆ ಇಲ್ಲ ಎಂದರು.
ಪ್ರವಚನಕಾರ ಕುಮಾರದೇವರು ಆಶೀರ್ವಚನ ನೀಡಿದರು. ಭಕ್ತಿಸೇವೆ ವಹಿಸಿದ್ದ ಗೌತಮಚಂದ್ ಚೋಪ್ರಾ ದಂಪತಿ ಜ. ತೋಂಟದ ಶ್ರೀಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಧೃವಕುಮಾರ ಹೊಸಮನಿ, ಉಪಾಧ್ಯಕ್ಷ ಡಿ.ಡಿ. ಮೋರನಾಳ, ಪಾಲಾಕ್ಷಿ ಗಣದಿನ್ನಿ, ಕಾರ್ಯದರ್ಶಿ ಸೊಲಬಣ್ಣ ಜೋಬಾಳಿ, ಖಜಾಂಚಿ ಕೊಟ್ರಯ್ಯ ಅಮರಗೋಳ ಹಿರೇಮಠ, ಸೇವಾಸಮಿತಿ ಅಧ್ಯಕ್ಷ ಈಶಣ್ಣ ಬೆಟಗೇರಿ, ಹಿರಿಯರಾದ ಕೊಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ದೇವಪ್ಪ ರಾಮೇನಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement