ಸುದ್ದಿ ಸಂಕ್ಷೇಪ
ಇಂದು ಪ್ರತಿಭಾ ಪುರಸ್ಕಾರ, ನೋಟ್ಬುಕ್ ವಿತರಣೆ
ಗದಗ: ಬಣಗಾರ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಸವೇಶ್ವರ ನಗರದ ಬಡಮಕ್ಕಳಿಗೆ ನೋಟ್ಬುಕ್ ಉಚಿತ ವಿತರಣಾ ಕಾರ್ಯಕ್ರಮ ಜು. 28ರಂದು ಸಂಜೆ 4ಕ್ಕೆ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲಾ ಬಣಗಾರ ಸಮಾಜ ಸೇವಾ ಸಂಘದಿಂದ ಹಾಗೂ ರಾಚಪ್ಪ ಕೆರೂರ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ ಹಾಗೂ ಬಣಗಾರ ಸಮಾಜದ ವತಿಯಿಂದ ಬಸವೇಶ್ವರ ನಗರದ ಬಡ ಮಕ್ಕಳಿಗೆ ನೋಟ್ಬುಕ್ ಉಚಿತ ವಿತರಣೆ ಕಾರ್ಯಕ್ರಮ ಜರುಗಲಿದೆ. ಅಖಿಲ ಭಾರತ ಬಣಗಾರ ಸಮಾಜದ ಗೌರವಾದ್ಯಕ್ಷ ದಾನಪ್ಪ ತಡಸದ ಉದ್ಘಾಟಿಸಲಿದ್ದು, ರಾಚಪ್ಪ ಕೆರೂರು ಪ್ರತಿಭಾ ಪುರಸ್ಕಾರ ನಡೆಸಿಕೊಡುವರು. ಪಾರಿತೋಷಕ ವಿತರಕರಾಗಿ ವೀರಪ್ಪ ಕಾರಕಟ್ಟಿ ಆಗಮಿಸಲಿದ್ದು, ಬಣಗಾರ ಸಮಾಜದ ಮುಖಂಡ ವೀರಭದ್ರಪ್ಪ ಚಳ್ಳಮರದ ನೋಟ್ಬುಕ್ ವಿತರಿಸಲಿದ್ದಾರೆ. ಅತಿಥಿಗಳಾಗಿ ಶಂಕರಲಿಂಗಪ್ಪ ಮುನವಳ್ಳಿ, ವೀರಣ್ಣ ಕಾರಕಟ್ಟಿ, ಬವರಾಜ ತಡಸದ, ರಾಚಪ್ಪ ಮಿಣಜಗಿ, ಶಿವಪುತ್ರಪ್ಪ ಬೇವಿನಮರದ, ಸುರೇಶ ಸಿರಿಗಣ್ಣವರ, ಸಿದ್ದಲಿಂಗಪ್ಪ ಪಿಳ್ಳಿ, ಶಿವಣ್ಣ ಇಟಗಿ, ಗಂಗಾಧರ ಬಡಿಗಣ್ಣವರ, ಬಸವಂತಪ್ಪ ಮಿಣಜಗಿ, ಸುಶೀಲಾ ಸಿರಿ ಮುಂತಾದವರು ಪಾಲ್ಗೊಳಲಿದ್ದಾರೆ ಎಂದು ಬಣಗಾರ ಸಮಾಜದ ಕೋಶಾಧ್ಯಕ್ಷರ ಬಸವರಾಜ ಹುಣಸೀಮರದ, ವಕ್ತಾರ ಬಸವರಾಜ ಸಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಾಮೂಹಿಕ ಯೋಗ ಉಚಿತ ತರಬೇತಿ
ಗಜೇಂದ್ರಗಡ: ಶಾಸಕ ಜಿ.ಎಸ್. ಪಾಟೀಲರ ತಾಯಿ ಬಸಮ್ಮಾ ಪಾಟೀಲರ 9ನೇ ಸ್ಮರಣೋತ್ಸವ ಪ್ರಯುಕ್ತ ಯೋಗಗುರು ವಚನಾನಂದ ಗುರುಜಿ ಅವರಿಂದ ಸಾಮೂಹಿಕ ಯೋಗ ಉಚಿತ ತರಬೇತಿ ಜು. 28ರಂದು ಬೆಳಗ್ಗೆ 11ಕ್ಕೆ ಸ್ಥಳೀಯ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಣ್ಣ ಸೊನ್ನದ ಹೇಳಿದರು. ಅವರು ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ ಸೇರಿದಂತೆ ಮಹಿಳೆಯರ ಧ್ವನಿಯಾಗಿ ನಿರಂತರ ಜನಸೇವೆಯಲ್ಲಿ ನಿರತರಾಗಿದ್ದ ಬಸಮ್ಮನವರು ಸಾರ್ವಜನಿಕ ಬದುಕಿಗೆ ಸಮರ್ಪಿಸಿಕೊಂಡಿದ್ದರು. ಅವರ ಕಾರ್ಯವೈಖರಿ ಇನ್ನೂವರೆಗೂ ಜನಮನದಲ್ಲಿ ಶಾಶ್ವತ ನೆಲೆಯೂರಿದೆ. 8 ವರ್ಷದಿಂದ ಬಸಮ್ಮನವರ ಸ್ಮರಣಾರ್ಥ ರೋಣ ಕ್ಷೇತ್ರದ ಅವರ ಅಭಿಮಾನಿಗಳು ಸಾಮೂಹಿಕವಾಗಿ ಒಂದಿಲ್ಲೊಂದು ಜನಸೇವೆ ಹಮ್ಮಿಕೊಂಡಿರುತ್ತಾರೆ. ಪ್ರಸ್ತುತ ಸಮಾಜ ಆರೋಗ್ಯ ರಕ್ಷಿಸುವ ಯೋಗಾಸನ ಆಯೋಜನೆ ಮಾಡಲಾಗಿದೆ ಎಂದರು. ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಮಾರುತಿ ಕಲ್ಲೊಡ್ಡರ, ಮುರ್ತುಜಾ ಡಾಲಾಯತ್, ಎಫ್.ಎಸ್. ಕರಿದುರಗಣ್ಣವರ, ದಾದು ಹಣಗಿ, ಹನುಮಂತ ಕಲ್ಲೊಡ್ಡರ, ಎಂ.ಕೆ. ಬಿಸ್ತಿ, ಭೀಮಣ್ಣ ತಳವಾರ, ಹಸನ ತಟಗಾರ, ಬಸವರಾಜ ಚೆನ್ನಿ, ಮಾರುತಿ ಬಂಕದ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಇಂದು ಪೂರ್ವಭಾವಿ ಸಭೆ
ಗದಗ: ಆಗಸ್ಟ್ 4 ರಂದು ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಸದಸ್ಯತ್ವದ ಅಭಿಯಾನ ಆಯೋಜಿಸಲಾಗಿದ್ದು, ಜು. 28 ರಂದು ಸಂಜೆ 4 ಗಂಟೆಗೆ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅದರ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಸಚಿನ ಪಾಟೀಲ ವಹಿಸುವರು. ಈ ಸಭೆಗೆ ಗದಗ ಮತಕ್ಷೇತ್ರದ ಜಿಪಂ, ತಾಪಂ, ನಗರಸಭೆ, ಪಪಂ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಿರಿಯ ಕಾಂಗ್ರೆಸ್ ಮುಖಂಡರು, ಎಲ್ಲ ಪದಾಧಿಕಾರಿಗಳು ಪಾಲ್ಗೊಳ್ಳಬೇಕೆಂದು ಗದಗ ವಿಧಾನಸಭಾ ಮತಕ್ಷೇತ್ರದ ಉಪಾಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.
ವಾಸನ: ವ್ಯಕ್ತಿ ಆತ್ಮಹತ್ಯೆ
ನರಗುಂದ: ತಾಲೂಕಿನ ವಾಸನದ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ. ಮೃತನನ್ನು ಬದಾಮಿ ತಾಲೂಕಿನ ಕೆರೂರ ಗ್ರಾಮದ ಶಂಕ್ರಪ್ಪ ಕಂಠಿ (58) ಎಂದು ಗುರುತಿಸಲಾಗಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.