ಆ. 14ರಂದು ಅಕ್ಕಮಹಾದೇವಿ ಮಂದಿರ ಉದ್ಘಾಟನೆ
ಲಕ್ಷ್ಮೇಶ್ವರ: ಶಿವಶರಣೆ ಅಕ್ಕಮಹಾದೇವಿಯ ಮಂದಿರ ಪಟ್ಟಣದಲ್ಲಿ ನಿರ್ಮಾಣವಾಗಿದ್ದು ಹೆಮ್ಮೆಯ ಸಂಗತಿಯಾಗಿದ್ದು, ಈ ದೇವಸ್ಥಾನದ ಉದ್ಘಾಟನೆಯು ಆಗಸ್ಟ್ 14ರಂದು ನೆರವೇರಲಿದ್ದು, ಪಟ್ಟಣದ ಶಿರಹಟ್ಟಿ ತಾಲೂಕು ಕದಳಿ ಮಹಿಳಾ ವೇದಿಕೆಯ ಸದಸ್ಯರು ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ ಎಂದು ಕದಳಿ ವೇದಿಕೆಯ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ಹೇಳಿದರು.
ಅವರು ಶನಿವಾರ ಪಟ್ಟಣದ ಬಿಂಕದಕಟ್ಟಿ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಮಾರು ರು. 20 ಲಕ್ಷ ವೆಚ್ಚದಲ್ಲಿ ಸುಂದರವಾದ ಅಕ್ಕಮಹಾದೇವಿಯ ಮಂದಿರ ನಿರ್ಮಾಣ ಮಾಡಲಾಗಿದ್ದು, ಅನೇಕ ದಾನಿಗಳು ದೇವಸ್ಥಾನ ನಿರ್ಮಾಣಕ್ಕೆ ಅಪಾರ ಸಹಾಯ ನೀಡಿದ್ದಾರೆ.
ಪಟ್ಟಣದ ಬಸೆಟ್ಟೆಪ್ಪ ತಟ್ಟಿ ಅವರು ದೇವಸ್ಥಾನ ನಿರ್ಮಾಣಕ್ಕೆ 1 ಗುಂಟೆ ಜಾಗೆಯನ್ನು ದಾನ ನೀಡಿದ್ದಾರೆ. ಅವರ ಪತ್ನಿ ಗಿರಿಜಮ್ಮ ತಟ್ಟಿಯವರು ಕೂಡ ರು. 1.40 ಲಕ್ಷ ಸಂಗ್ರಹಿಸಿ ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ್ದಾರೆ. 1946ರಲ್ಲಿಯೇ ಅಕ್ಕಮಹಾದೇವಿ ದೇವಸ್ಥಾನ ನಿರ್ಮಾಣ ಮಾಡಬೇಕೆಂಬ ಕನಸನ್ನು ಅಂದಿನ ಕದಳಿ ಮಹಿಳಾ ವೇದಿಕೆಯ ಸದಸ್ಯರು ಹೊಂದಿದ್ದರು. ಆ ಕನಸು ಈಗ ಈಡೇರುತ್ತಿದೆ ಎಂದರು.
ಆಗಸ್ಟ್ 7ರಂದು ಅಕ್ಕಮಹಾದೇವಿಯ ಮೂರ್ತಿಯು ಪಟ್ಟಣಕ್ಕೆ ಆಗಮಿಸಲಿದ್ದು, ಅಂದು ಸಕಲ ವಾದ್ಯಗಳೊಂದಿಗೆ ಮೂರ್ತಿಯ ಮೆರವಣಿಗೆ ಮಾಡಲಾಗುವುದು. ನಂತರ ಅನೇಕ ದೇವತಾ ಕಾರ್ಯ ನೆರವೇರಿಸಿ ಆಗಸ್ಟ್ 14ರಂದು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಕದಳಿ ಮಹಿಳಾ ವೇದಿಕೆಯ ಸದಸ್ಯೆ ಪ್ರತಿಮಾ ಮಹಾಜನಶೆಟ್ಟರ, ಸರೋಜಾ ಬನ್ನೂರ, ಶಾಂತಾ ಭಿಕ್ಷಾವರ್ತಿ ಹಿರೇಮಠ, ಶಾರದಾ ಮಹಾಂತಶೆಟ್ಟರ, ಶಕುಂತಲಾ ಹೊರಟ್ಟಿ, ಆರುಂಧತಿ ಬಿಂಕದಕಟ್ಟಿ ಹಾಗೂ ಎ.ಆರ್. ಮಾಗಳದ, ಮಹಾಂತೇಶ ಯಾಳಗಿ, ಮೌನೇಶ ಬಡಿಗೇರ, ಅಜ್ಜಣ್ಣ ಬಿಂಕದಕಟ್ಟಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.