ಕಪ್ಪತಗುಡ್ಡ ರಕ್ಷಿಸಿದರೆ ಬದುಕು ಬಂಗಾರ: ದೊಡ್ಡಮನಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 28
ಕಪ್ಪತಗುಡ್ಡ ಸಂಪೂರ್ಣ ಸಂರಕ್ಷಣೆಯಾದರೆ ಎಲ್ಲರ ಬದುಕು ಬಂಗಾರವಾಗುತ್ತದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಡರಗಿ, ಕಪ್ಪತಗುಡ್ಡ ಪರಿಸರ ಸಂರಕ್ಷಣಾ ವೇದಿಕೆ ಮುಂಡರಗಿ, ಸುಜಲಾನ್ ಫೌಂಡೇಶನ್, ಕಪ್ಪತಹಿಲ್ಸ್ ವಲಯ ಅರಣ್ಯ ಇಲಾಖೆ, ವಿವೇಕ ಜಾಗೃತ ಬಳಗ, ಆಯುಷ್ಯ ಇಲಾಖೆ ಮುಂಡರಗಿ ಇವುಗಳ ಆಶ್ರಯದಲ್ಲಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಹತ್ತಿರವಿರುವ ಕಪ್ಪತಗುಡ್ಡ ಭಾಗದಲ್ಲಿ ಬೀಜ ಊರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಪ್ಪತಗುಡ್ಡದ ಪರಿಸರದಲ್ಲಿ ಬೀಜ ಬಿತ್ತುವ ಕೆಲಸ ಮಳೆಗಾಲದಲ್ಲಿ ನಿರಂತರ ನಡೆಯುವುದರ ಜತೆಗೆ ಕಪ್ಪತಗುಡ್ಡದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಬೀಜ ಬಿತ್ತುವ ಕಾರ್ಯಕ್ರಮವನ್ನು ಮಕ್ಕಳಿಂದ ಮಾಡಿಸಿದ್ದು ಶ್ಲಾಘನೀಯ ಎಂದರು. ಬಿಇಓ ಎಂ.ಎ. ರಡ್ಡೇರ ಮಾತನಾಡಿ, ಸುಮಾರು 64 ಕಿ.ಮೀ. ಉದ್ದವಾಗಿ ಮೈಚಾಚಿರುವ ಕಪ್ಪತಗುಡ್ಡ ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿಯ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಹಬ್ಬಿಕೊಂಡಿದೆ. ಅನೇಕ ಐತಿಹಾಸಿಕ ಗುಡಿ ಗುಂಡಾರ, ಝರಿ, ಕೊಳ್ಳಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಕಪ್ಪತಗುಡ್ಡ ಔಷಧಿ ಸಸ್ಯಗಳ ಕಣಜವಾಗಿದೆ. ಇದನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದರು.
ಸುಜಲಾನ್ ಫೌಂಡೇಶನ್‌ನ ವ್ಯವಸ್ಥಾಪಕ ನಿರ್ದೇಶಕ ದೀಪಕ ಕ್ಷೀರಸಾಗರ, ಗ್ರಾಪಂನ ಮಾಜಿ ಅಧ್ಯಕ್ಷ ಟಿ.ಬಿ. ಮೇಟಿ, ಆರ್‌ಎಫ್‌ಓ ವಿ.ಎಚ್. ಪರಿಮಳ ಮಾತನಾಡಿದರು. ಸುಜಲಾನ್ ಫೌಂಡೇಶನ್‌ನ ಬಿ. ಪ್ರಹ್ಲಾದ, ಡಾ. ನಿಂಗು ಸೊಲಗಿ, ಶರಣಪ್ಪ ಕುಬಸದ, ದೇವಪ್ಪ ಇಟಗಿ, ಆರ್. ಪ್ರಸಾದ, ಹಣಗಿ, ಎ.ಪಿ. ದಂಡಿನ, ಆರ್.ಬಿ. ಮುಳ್ಳೊಳ್ಳಿ, ಡಾ. ಪಿ.ಬಿ. ಹಿರೇಗೌಡ್ರ, ದೇವಪ್ಪ ಇಟಗಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ 1 ಸಾವಿರಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಕಪ್ಪತಗುಡ್ಡದ ಆವರಣದಲ್ಲಿ ಸುಮಾರು 400 ಕೆಜಿ ವಿವಿಧ ಜಾತಿಯ ಬೀಜಗಳನ್ನು ಮಕ್ಕಳು ಬಿತ್ತಿದರು. ಕಪ್ಪತಗುಡ್ಡ ಪರಿಸರ ಸಂರಕ್ಷಣಾ ವೇದಿಕೆಯ ಪ್ರೊ. ಸಿ.ಎಸ್. ಅರಸನಾಳ ನಿರೂಪಿಸಿದರು. ಡಾ. ಪಿ.ಬಿ. ಹಿರೇಗೌಡ್ರ ವಂದಿಸಿದರು.