ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡದು

Lingaraj Badiger
Updated On : 29 Jul 2013, 11:49 am

ಗಜೇಂದ್ರಗಡ: ಹಿಂದಿನ ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳ ಕಾರ್ಯ ವೈಖರಿಯಿಂದ ಬೇಸತ್ತ ಜನತೆ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆದರೆ, ಸೇಡಿನ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿಯವರ ಹುರುಳಿಲ್ಲದ ಆರೋಪವನ್ನು ಜನ ನಂಬುವುದಿಲ್ಲ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಸಂಜೆ ಸ್ಥಳೀಯ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ ನಡೆದ ವಾಜಪೇಯಿ ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾಮಗಾರಿ ಅದೇಶ ಪ್ರತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವರೇ ಆಯ್ಕೆ ಮಾಡಿರುವ ಫಲಾನುಭವಿಗಳಿಗೆ ಈಗ ಕಾಮಗಾರಿ ಆದೇಶ ಪತ್ರ ನೀಡುತ್ತಿದ್ದೇವೆ. ಸರ್ಕಾರಿ ಕಚೇರಿ ಕೆಲಸಕ್ಕಾಗಿ ಅಧಿಕಾರಿಗಳಿಗೆ ಯಾರೂ ಲಂಚ ಕೊಡಬೇಡಿ. 6 ತಿಂಗಳ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ನ್ಯೂನತೆ ಜತೆಗೆ ಅವ್ಯವಹಾರದ ಕೊಳೆಯನ್ನು ತೆಗೆದು, ಸ್ವಚ್ಛ ಆಡಳಿತ ನೀಡುವುದು ನನ್ನ ಮುಂದಿನ ಗುರಿಯಾಗಿದೆ. ಗಜೇಂದ್ರಗಡದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 10 ವರ್ಷದ ಹಿಂದೆ ನಿರ್ಮಿಸಿರುವ ಮನೆಗಳ ಬಡಾವಣೆಗೆ ಜಿ.ಎಸ್. ಪಾಟೀಲ ಎಂದು ನಾಮಕರಣ ಮಾಡಿದಕ್ಕೆ ಅಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯದ ಜತೆಗೆ ಹಕ್ಕುಪತ್ರ ವಿತರಿಸದ ಅಂದಿನ ಸಚಿವ ಕಳಕಪ್ಪ ಬಂಡಿ ಸೇಡಿನ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ದ್ವೇಷ ಸಾಧಿಸುವುದು ಬಿಜೆಪಿ ಹೊರತು ಕಾಂಗ್ರೆಸ್ ಅಲ್ಲ ಎಂದು ದೂರಿದರು. ಪ್ರಸ್ತುತ ಪಡಿತರ ವ್ಯವಸ್ಥೆಯ ಕೆಲ ದೋಷಗಳ ಬಗೆಗೆ ವಿಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ತಾತ್ಕಾಲಿಕ ಪಡಿತರ ಚೀಟಿ ಹೊಂದಿದವರು ತಾಲೂಕು ಕೇಂದ್ರ ರೋಣಕ್ಕೆ ತೆರಳಿ ಆಹಾರ ಇಲಾಖೆ ಅಧಿಕಾರಿಗಳಿಂದ ಕಾಯಂ ಪಡಿತರ ಚೀಟಿ ಪಡೆದು ನ್ಯಾಯಬೆಲೆ ಕೇಂದ್ರದಲ್ಲಿ ಆಹಾರ ಧಾನ್ಯ ಪಡೆಯಿರಿ ಎಂದರು.
ಪುರಸಭೆ ಸದಸ್ಯ ಎಂ.ಎಸ್. ಹಡಪದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಮೋಹನಸಾ ರಾಯಬಾಗಿ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು. ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಲಾಯಿತು. ವಿ.ಆರ್. ಗುಡಿಸಾಗರ, ಚಂಬಣ್ಣ ಚವಡಿ, ಬಸವರಾಜ ನವಲಗುಂದ, ಶ್ರೀಕಾಂತ ಅವಧೂತ, ಮಾರುತಿ ಕಲ್ಲೊಡ್ಡರ, ಶಶಿಧರ ಗಂಜಿಗೌಡರ, ದತ್ತುಸಾ ಬಾಕಳೆ, ಹಸನ ತಟಗಾರ, ಉಮೇಶ ರಾಠೋಡ, ಪುರಸಭೆ ಸದಸ್ಯೆ ಸುಜಾತಾ ಚುಂಚಾ, ಮಕ್ತುಮಬಿ ಹಣಗಿ, ಶಾರದಾ ರಾಠೋಡ, ಶಾರದಾ ತಳವಾರ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಆರೋಗ್ಯಾಧಿಕಾರಿ ಮಹೇಶ ನಿಡಶೇಶಿ ಸ್ವಾಗತಿಸಿದರು. ಉಪನ್ಯಾಸಕ ಬಿ.ಕೆ. ಮಾದಿ ನಿರೂಪಿಸಿದರು. ಮುರ್ತುಜಾ ಡಾಲಾಯತ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement