ಚಿಂಚಲಿ: ಸಂಯುಕ್ತ ನೀರು ಯೋಜನೆ
ಮುಳಗುಂದ: ಚಿಂಚಲಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ 3 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಸಂಯುಕ್ತ ಕುಡಿಯುವ ನೀರು ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಗದಗ ಪಂಚಾಯತ್ ರಾಜ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮಾಪತಿ ಶೆಟ್ಟರ್ ಹೇಳಿದರು.
ಅವರು ಶುಕ್ರವಾರ ಸಮೀಪದ ಚಿಂಚಲಿ ಗ್ರಾಪಂನಲ್ಲಿ ಜರುಗಿದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ ಈ ವಿಷಯ ತಿಳಿಸಿದರು. ಕಲ್ಲೂರ, ಚಿಂಚಲಿ, ನೀಲಗುಂದ ಗ್ರಾಮಗಳಿಗೆ ಶಾಶ್ವತ ಕುಡಿವ ನೀರು ಪೂರೈಸಲು ಸುಮಾರು 25 ಎಕರೆ ಪ್ರದೇಶದಲ್ಲಿ ಕೆರೆ ನೀರು ಸಂಗ್ರಹಿಸಿ ಗ್ರಾಮದ ಜನರಿಗೆ ಶುದ್ಧ ಕುಡಿವ ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದರು. ವಿಜಯಕುಮಾರ ಬಂಗಾರಿ, ನೀಲಗುಂದ ಗ್ರಾಮದಲ್ಲಿ ವಸತಿ ರಹಿತರಿಗಾಗಿ ನಿರ್ಮಿಸುತ್ತಿರುವ ಬಸವಾ ವಸತಿ ಯೋಜನೆಯಲ್ಲಿ ಆಗುತ್ತಿರುವ ವಿಳಂಬವನ್ನು ಶೀಘ್ರದಲ್ಲಿಯೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಗೆ ಹರಿಸಬೇಕು. ಚಿಂಚಲಿ ಗ್ರಾಪಂನಲ್ಲಿ ಕರವಸೂಲಿ ಸೇರಿದಂತೆ ಆದಾಯ ತರುವ ಯಾವ ಕಾರ್ಯಗಳಿಗೂ ಅಧಿಕೃತ ದಾಖಲಾತಿಗಳಿಲ್ಲದೆ ಇರುವುದು ಕಂಡು ಬಂದಿದ್ದು ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಬೇಕು. ಸರ್ಕಾರದ ಹಲವಾರು ಯೋಜನೆಗಳಲ್ಲಿ ಸಾರ್ವಜನಿಕರಿಗೆ ಸಾಕಷ್ಟು ವಿಳಂಬವಾಗುತ್ತಿದ್ದು ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದರು.
ಕೃಷಿ ಇಲಾಖೆ, ಜಲಾನಯನ, ಶಿಕ್ಷಣ, ಆರೋಗ್ಯ, ಗ್ರಾಮ ಲೆಕ್ಕಾಧಿಕಾರಿ, ಜಿಪಂ ವಿಭಾಗ, ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಯೋಜನೆಗಳ ಬಗ್ಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಈರವ್ವ ಸಂದಕದ ವಹಿಸಿದ್ದರು. ಕಾರ್ಯದರ್ಶಿ ಎಂ.ಎನ್. ಗಾಜಿ, ಮಹೇಶ ಬಾಲರಡ್ಡಿ, ಅರಮನಿ, ಚನ್ನಪ್ಪ ನಾಗರಡ್ಡಿ, ಶರೀಫ ನದಾಫ, ಮಂಜುನಾಥ ತಿರ್ಲಾಪುರ, ಎಚ್.ವೈ. ಸಂದಕದ, ವೈ.ಡಿ. ಪೂಜಾರ ಇದ್ದರು.
ಅಧಿಕಾರಿಗಳ ಗೈರು: ಆಕ್ರೋಶ
ಗ್ರಾಮ ಸಭೆ ನಡೆಸುವುದರ ಮೂಲಕ ಜನರ ಬಳಿ ಸರ್ಕಾರದ ಯೋಜನೆಗಳನ್ನು ತರುವ ಜನಸ್ಪಂದನ ಸಭೆಗೆ ಸರ್ಕಾರದ ಹಲವಾರು ಇಲಾಖೆಯ ಅಧಿಕಾರಿಗಳು ಬಂದಿರಲಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಲೋಕೋಪಯೋಗಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ ಮುಂತಾದ ಇಲಾಖೆ ಅಧಿಕಾರಿಗಳು ಹಾಜರಾಗದಿರುವುದು ಜನರ ಅಕ್ರೋಶಕ್ಕೆ ಕಾರಣವಾಯಿತು.