ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರಿಲ್ಲದೆ ಭಣಗುಡುತ್ತಿರುವ ಭೀಷ್ಮಕೆರೆ

Lingaraj Badiger
Updated On : 29 Jul 2013, 11:41 am

ಕನ್ನಡಪ್ರಭ ವಾರ್ತೆ, ಗದಗ, ಜು. 28
ಗದಗ-ಬೆಟಗೇರಿ ಅವಳಿ ನಗರದ ಅಂತರ್ಜಲದ ಮೂಲವಾಗಿರುವ ನಗರದ ವಿಶಾಲವಾದ ಭೀಷ್ಮಕೆರೆಯು ಸಮರ್ಪಕ ನೀರು ಬರದೇ ಇಂದು ಸಂಪೂರ್ಣ ಬರಿದಾಗಿದೆ. ಜಿಲ್ಲಾಡಳಿತ ಈ ಕೆರೆ ಅಭಿವೃದ್ಧಿಗೆ, ನೀರು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಕೆರೆ ಇದ್ದೂ ಇಲ್ಲದಂತಾಗಿದೆ.
ರಾಜ್ಯದ ಬಹುತೇಕ ಕಡೆ ಉತ್ತಮ ಮಳೆಯಾದರೂ ಗದಗ-ಬೆಟಗೇರಿ ನಗರಕ್ಕೆ ನಿರೀಕ್ಷಿತ ಮಳೆ ಬೀಳದ ಕಾರಣ ಇಲ್ಲಿನ ಜನರು ಕಂಗಾಲಾಗಿದ್ದಾರೆ. ಶಹರ ಪ್ರದೇಶದ ಜನತೆ ನೀರಿಗಾಗಿ ಬೋರ್‌ವೆಲ್ ನಳಗಳಿಗೆ ಅವಲಂಬಿಸುವುದು ಅನಿವಾರ್ಯವಾಗಿದೆ. ಕೆಲವೊಂದು ಹೊಸ ಬಡಾವಣೆ ಹಾಗೂ ಪ್ರದೇಶಗಳಲ್ಲಿ ಇಂದಿಗೂ ತುಂಗಭದ್ರಾ ನದಿ ನೀರಿನ ಪೂರೈಕೆ ಇರದ ಕಾರಣ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಇನ್ನೊಂದೆಡೆ ಜಿಲ್ಲೆಯಲ್ಲಿ ಸಮರ್ಪಕ ಮಳೆ ಕೊರತೆಯಿಂದ ಅಂತರ್ಜಲ ಕಡಿಮೆಯಾಗುತ್ತಿದೆ. ಹೀಗಾಗಿ ನಗರದ ಎತ್ತರ ಪ್ರದೇಶದಲ್ಲಿರುವ ಈ ಭೀಷ್ಮ ಕೆರೆಯನ್ನು ಅಭಿವೃದ್ಧಿಗೊಳಿಸಿ, ಇಲ್ಲಿ ಸಮರ್ಪಕ ನೀರು ನಿಲ್ಲಲು ಸೂಕ್ತ ಕ್ರಮ ಕೈಗೊಂಡಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿನ ಬೋರ್‌ವೆಲ್‌ಗಳಲ್ಲಿ ಸಮರ್ಪಕ ನೀರು ಬೀಳಲು ಹಾಗೂ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ.
ಕೆರೆಗೆ ಬೇಕಿದೆ ಕಾಯಕಲ್ಪ: ಭೀಷ್ಮಕೆರೆ ತೆಗ್ಗು ಪ್ರದೇಶಕ್ಕೆ ಮಳೆ ನೀರು ಹರಿದು ಬರುತ್ತಿದ್ದ ಮಾರ್ಗಗಳು ಮುಚ್ಚಿ ಹೋಗಿದ್ದು, ಅವುಗಳನ್ನೆಲ್ಲ ತೆರವುಗೊಳಿಸಿ ಕೆರೆ ಒತ್ತುವರಿಯನ್ನೂ ತೆರವುಗೊಳಿಸಲು ದಿಟ್ಟ ಕ್ರಮ ಅಗತ್ಯ. ಈ ಹಿಂದೆ ಇದೆ ಕೆರೆಯಲ್ಲಿ ಸಚಿವ ಎಚ್.ಕೆ. ಪಾಟೀಲ ಅವರೇ ಬೋಟಿಂಗ್ ವ್ಯವಸ್ಥೆ ಉದ್ಘಾಟಿಸಿದ್ದರು. ಅಂತಹ ಬೋಟಿಂಗ್ ವ್ಯವಸ್ಥೆ ಮತ್ತೆ ಈ ಕೆರೆಯಲ್ಲಿ ಕಾಣುವಂತಾಗಬೇಕು. ಈಗಾಗಲೇ ಭೀಷ್ಮಕೆರೆಯ ಎತ್ತರದ ಎರಡು ಎಕರೆ ಜಾಗೆಯಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣವಾಗುತ್ತಿದ್ದು, ಇದರೊಂದಿಗೆ ಉದ್ಯಾನವನ್ನೂ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಇಡಿ ಭೀಷ್ಮ ಕೆರೆ ಪ್ರದೇಶವನ್ನು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಚಿವ ಎಚ್.ಕೆ. ಪಾಟೀಲರು ಗಮನಹರಿಸುವುದು ಅವಶ್ಯಕವಿದೆ.
ನದಿ ನೀರನ್ನಾದರೂ ಬಿಡಬೇಕು: ಒಂದು ಕಾಲದಲ್ಲಿ ಗದಗ-ಬೆಟಗೇರಿ ಅವಳಿ ನಗರಕ್ಕೆ ಮುಖ್ಯ ಕೆರೆಯಾಗಿದ್ದ ಭೀಷ್ಮಕೆರೆಯು ಇಂದು ನೀರಿಲ್ಲದೇ ಬರಿದಾಗಿದ್ದು, ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಲ್ಲಿ ಮತ್ತೆ ಕೆರೆಯ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗಲಿದೆ. ಸದ್ಯ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಈ ನದಿ ನೀರನ್ನಾದರೂ ಮಳೆಗಾಲ ಮುಗಿಯುವವರೆಗೆ ನಿಯಮಿತವಾಗಿ ಭೀಷ್ಮಕೆರೆಗೆ ಹರಿಸಿದಲ್ಲಿ ಮಳೆಗಾಲ ಮುಗಿಯುವ ವೇಳೆಗೆ ಭೀಷ್ಮಕೆರೆಯು ಸಂಪೂರ್ಣ ಮೈದುಂಬಿಕೊಳ್ಳುತ್ತದೆ. ಇದರೊಟ್ಟಿಗೆ ಕೆರೆಯ ಮಧ್ಯದಲ್ಲಿಯೇ ವಿಶ್ವದಲ್ಲಿಯೇ ಅತಿ ಎತ್ತರ ಬಸವೇಶ್ವರ ಮೂರ್ತಿಯನ್ನು ಸ್ಥಾಪಿಸುತ್ತಿದ್ದಾರೆ. ಮೂರ್ತಿ ವೀಕ್ಷಣೆಗೆ ಬರುವವರಿಗೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮೆರಗು ಬರಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಆಸಕ್ತಿವಹಿಸಬೇಕಿದೆ.
-ಅಜೀಜ್‌ಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement