ರಸ್ತೆಯೋ...ಕೆಸರು ಗದ್ದೆಯೋ...!
-ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 28
ಪಟ್ಟಣದ ಯಾವುದೇ ರಸ್ತೆಗೆ ಹೋದರೂ ತಗ್ಗು, ಗುಂಡಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಸದ್ಯ ಇಲ್ಲಿನ ರಸ್ತೆಗಳು ಕೆಸರು ಗದ್ದೆಗಳಂತಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
2-3 ವರ್ಷಗಳಿಂದ ಪಟ್ಟಣದ ಯಾವುದೇ ರಸ್ತೆಗೆ ಹಿಡಿ ಮಣ್ಣು ಹಾಗೂ ಡಾಂಬರ್ ಹಾಕಿಲ್ಲ. ಇದರಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಆಡಳಿತ ನಡೆಸುವವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದೇ ಹಲವಾರು ಕಾಮಗಾರಿಗಳು ಅರ್ಧಕ್ಕೆ ನಿಂತು ಅದರಿಂದ ಸಾರ್ವಜನಿಕರಿಗೆ ತೊದರೆಯಾಗುವುದನ್ನು ನೀವೆಲ್ಲ ಕೇಳಿದ್ದೀರಿ. ಆದರೆ, ಪಟ್ಟಣದಲ್ಲಿನ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದರೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ, ಕಾಮಗಾರಿ ನಡೆಯದೇ, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದ್ದು, ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.
ಡಾಂಬರೀಕರಣಕ್ಕೆ ರು. 85 ಲಕ್ಷ: ರಾಜಕೀಯ ಗೊಂದಲದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಈ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಪಟ್ಟಣದ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ರು. 85 ಲಕ್ಷ ಬಿಡುಗಡೆಯಾಗಿದೆ. ಆದರೆ, ರಾಜಕೀಯ ಮೇಲಾಟದಲ್ಲಿ ಅದು ರಸ್ತೆ ಅಭಿವೃದ್ಧಿಗೆ ಬಳಕೆಯಾಗದೇ ಹಾಗೆಯೇ ಉಳಿದಿದೆ. ಈ ಕಾಮಗಾರಿಯನ್ನು ಟೆಂಡರ್ ಕರೆದು, ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರಿಗೆ ನೀಡಿ, ಇನ್ನೇನು ರಸ್ತೆ ನಿರ್ಮಾಣವಾಗಬೇಕು ಎನ್ನುವ ಹೊತ್ತಿನಲ್ಲಿ, ಪಟ್ಟಣದ ಕೆಲವರು ಬಜಾರ್ ರಸ್ತೆಗೆ ಡಾಂಬರೀಕರಣ ಬೇಡ ಅದನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಿಸಬೇಕು ಎನ್ನುವ ಅರ್ಜಿ ಸಲ್ಲಿಸಿದ್ದರಿಂದ ರಸ್ತೆ ಕಾಮಗಾರಿ ಹಾಗೆ ಉಳಿದುಕೊಂಡಿದ್ದು, ಇದು ಬಗೆ ಹರಿಯದ ಸಮಸ್ಯೆಯಾಗಿ ಕುಳಿತಿದೆ.
ಶಾಸಕರು ಗಮನಹರಿಸುವರೇ?: ಹೊಸದಾಗಿ ಚುನಾಯಿತರಾಗಿ ಬಂದಿರುವ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಪಟ್ಟಣದ ರಸ್ತೆಗಳ ಬಗ್ಗೆ ಗಮನಹರಿಸಬೇಕಿದೆ. ಲಕ್ಷ್ಮೇಶ್ವರ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಅದರಲ್ಲಿಯೂ ಮುಖ್ಯವಾಗಿ ಪಟ್ಟಣದ ಈ ಮುಖ್ಯ ರಸ್ತೆ ಅಭಿವೃದ್ಧಿಗೊಳಿಸಲು ಎಲ್ಲರಲ್ಲಿಯೂ ಸಮನ್ವಯತೆ ಮೂಡಿಸುವತ್ತ ಗಮನ ನೀಡಬೇಕಿದೆ. ಅಂತಹ ಪ್ರಯತ್ನ ಶಾಸಕರಿಂದ ನಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.