ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಆಶ್ರಮ ಶಾಲೆ ಮುಚ್ಚಬೇಡಿ: ಅನಿರ್ದಿಷ್ಟಾವಧಿ ಧರಣಿ

Lingaraj Badiger
Updated On : 30 Jul 2013, 11:02 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 29
ಸ್ಥಳೀಯ ಗೋರ ಬಂಜಾರ ಸೇವಾಲಾಲ ತಾಂಡಾ ಬಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿರುವ ಸರ್ಕಾರಿ ಆಶ್ರಮ ಶಾಲೆಯನ್ನು ಮುಚ್ಚದೇ ಮೂಲ ಸೌಲಭ್ಯ ಒದಗಿಸುವ ಬೇಡಿಕೆಗೆ ಆಗ್ರಹಿಸಿ ಸೋಮವಾರ ವಿಶೇಷ ತಹಸೀಲ್ದಾರ್ ಕಚೇರಿ ಮುಂದೆ ವಿದ್ಯಾರ್ಥಿಗಳು ಎಸ್‌ಎಫ್‌ಐ ಸಂಘಟನೆ ಕಾರ್ಯಕರ್ತರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಪೀರು ರಾಠೋಡ ಮಾತನಾಡಿ, ಆಶ್ರಮ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ತೆಗೆದುಕೊಳ್ಳಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, 2, 3, 4ನೇ ತರಗತಿ ಮಕ್ಕಳ ಪ್ರವೇಶ ದಾಖಲು ಮಾಡಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಅಲ್ಲದೇ ಪಟ್ಟಣದ ಏಕೈಕ ಆಶ್ರಮ ಶಾಲೆ ಮುಚ್ಚುವುದರಿಂದ ಬಡ, ದಲಿತ, ಹಿಂದುಳಿದ ಮಧ್ಯಮ ವರ್ಗ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಪಾಲಕರು ಸಹ ಮಕ್ಕಳನ್ನು ಬೇರೆ ಶಾಲೆಗೆ ಕಳಿಸದೇ ದುಡಿಮೆಗೆ ಹಚ್ಚುತ್ತಾರೆ.
ಆಶ್ರಮ ಶಾಲೆಗೆ ಕೊರತೆ ಇರುವ ಮೂಲ ಸೌಕರ್ಯ ಒದಗಿಸಿಕೊಟ್ಟು ಅಗತ್ಯಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಹಿಂದುಳಿದ ಕುಟುಂಬಗಳ ಮಕ್ಕಳನ್ನು ಪೋಷಿಸಲು ಸರ್ಕಾರ ಮುಂದಾಗಬೇಕು. ಆದರೆ, ಇದನ್ನೆಲ್ಲ ಮಾಡದೇ ಕುಂಟು ನೆಪವೊಡ್ಡಿ ಶಾಲೆ ಮುಚ್ಚಲು ಹೊರಟಿರುದು ನಾಚಿಕೇಗೇಡಿನ ಸಂಗತಿ ಎಂದು ದೂರಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಬಾಲು ರಾಠೋಡ, ಶಿವು ಚವ್ಹಾಣ ನಗರ ಸಮಿತಿ ಉಪಾಧ್ಯಕ್ಷ ಶಿವಾನಂದ ಭೋಸ್ಲೆ, ನಗರ ಸಮಿತಿ ಸಹಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿದರು.
ಸ್ಥಳಕ್ಕೆ ದೌಡಾಯಿಸಿದ ರೋಣ ತಹಸೀಲ್ದಾರ್ ಎಂ.ಬಿ. ಪಾಟೀಲ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ವರಗಪ್ಪನವರ ಪ್ರತಿಭಟನಾಕಾರ ಅಹವಾಲು ಆಲಿಸಿದರು. ತಕ್ಷಣ ಮೂಲ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರ ಆದೇಶದಂತೆ ಕಾರ್ಯನಿರ್ವಸುತ್ತಿದ್ದೇವೆ ಎಂದು ಸಬೂಬ ನೀಡಲು ಮುಂದಾದಾಗ ಇದಕ್ಕೊಪ್ಪದ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಈ ಆಶ್ರಮ ಶಾಲೆಗೆ ತರಗತಿ ಪ್ರವೇಶ ಪಡೆಯುವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದರು. ಕಳಕೇಶ ರಾಠೋಡ, ಶಿವಾಜಿ ಗಡ್ಡದ, ರಘು ಪಾಟೀಲ, ವಿನಯ ಪ್ರಸಾದ, ಮಂಜುನಾಥ ಬಳಿಗೇರ, ಪ್ರಕಾಶ ಬಡಿಗೇರ, ರಾಜು ನಾಯಕ, ಅನು ರಾಂಪುರ, ರೇಖಾ ಬಡಿಗೇರ, ಹುಲಿಗೆವ್ವ ಗೌಡರ ಮುಂತಾದವರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement