ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಚ್ಕೆ ಜನ್ಮದಿನ: ಆರೋಗ್ಯ ತಪಾಸಣೆ ಶಿಬಿರ

Lingaraj Badiger
Updated On : 30 Jul 2013, 10:52 am

ಕನ್ನಡಪ್ರಭ ವಾರ್ತೆ, ಗದಗ, ಜು. 29
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ 60ನೇ ಹುಟ್ಟುಹಬ್ಬದಂಗವಾಗಿ ಆಗಸ್ಟ್ 15 ಮತ್ತು 16ರಂದು ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಆರೋಗ್ಯ ಉಚಿತ ತಪಾಸಣೆಯ ಬೃಹತ್ ಶಿಬಿರ, ಆಟೋ ಚಾಲಕರಿಗೆ ವಿಮಾ ಪಾಲಿಸಿ ವಿತರಣೆ, ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಸೇರಿದಂತೆ ಅನೇಕ ವಿಧಾಯಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎಸ್.ಆರ್. ಇನ್ಫೋಟೆಕ್‌ನ ಚೇರ್‌ಮನ್ ಸಚಿನ್ ಪಾಟೀಲ ಹೇಳಿದರು.
ಅವರು ಸೋಮವಾರ ನಗರದ ಯಂಗ್ ಇಂಡಿಯಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಸ್.ಆರ್. ಇನ್ಫೋಟೆಕ್, ಯಂಗ್ ಇಂಡಿಯಾ ಮತ್ತು ಡಾ. ಎನ್.ಬಿ. ಪಾಟೀಲ ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೃದಯ ರೋಗಿಗಳಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯನ್ನು ಆ. 15 ಮತ್ತು 16ರಂದು ನಗರದ ಡಾ. ಎನ್.ಬಿ. ಪಾಟೀಲ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದು, ತಪಾಸಣೆಗೆ ಬರುವ ಜನರು ನಗರದ ಎಸ್.ಆರ್. ಇನ್ಫೋಟೆಕ್ ಕಚೇರಿ, ಯಂಗ್ ಇಂಡಿಯಾ ಕಚೇರಿ ಅಥವಾ ಡಾ. ಎನ್.ಬಿ. ಪಾಟೀಲ ಆಸ್ಪತ್ರೆಯಲ್ಲಿ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸುಮಾರು 700 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಪ್ರತಿದಿನ 300 ಜನರ ತಪಾಸಣೆ ನಡೆಸಲಾಗುವುದು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯ ಸಿಬ್ಬಂದಿ ತಪಾಸಣೆ ನಡೆಸುವರು. ಜನತೆ ತಪಾಸಣೆಗೆ ತಮ್ಮ ಹೆಸರು ನೋಂದಾಯಿಸಿದ ತಕ್ಷಣವೇ ಅವರಿಗೆ ದಿನಾಂಕ ಮತ್ತು ಸಮಯ ತಿಳಿಸಲಾಗುವುದು ಎಂದರು.
ಯಂಗ್‌ಇಂಡಿಯಾದ ಸಂಸ್ಥಾಪಕ ಅಧ್ಯಕ್ಷ ವಿ.ಆರ್. ಗೋವಿಂದಗೌಡ್ರ ಮಾತನಾಡಿ, ಸಚಿವ ಎಚ್.ಕೆ. ಪಾಟೀಲರ 60ನೇ ಜನ್ಮದಿನ ನಿಮಿತ್ತ ಯಂಗ್ ಇಂಡಿಯಾ ಪರಿವಾರದಿಂದ 5 ಅಂಗವಿಕಲ ಮಕ್ಕಳಿಗೆ ಟ್ರೈಸಿಕಲ್, ಸಾಲದ ಮೇಲೆ 60 ಆಟೋಗಳ ವಿತರಣೆ, 100 ಆಟೋ ಚಾಲಕರಿಗೆ ವಿಮಾ ಪಾಲಿಸಿ ನೀಡುವುದಾಗಿ ಹೇಳಿದರು.
ಡಾ. ಪವನ್ ಪಾಟೀಲ, ಗದಗ ಎಪಿಎಂಸಿ ಉಪಾಧ್ಯಕ್ಷ ಸಿದ್ದಲಿಂಗೇಶ್ವರಗೌಡ ಪಾಟೀಲ, ಅಶೋಕ ಮಂದಾಲಿ, ವಿಜಯ ಕಲ್ಮನಿ, ವೀರೇಶ ಕಮ್ಮಾರ, ಗಂಗಾಧರ ಬ್ಯಾಹೋಟಿ, ವಿಕಾಸ ಸಾವುಕಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement