ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರಿಗಾಗಿ ರಸ್ತೆಗಿಳಿದ ಜನ

Lingaraj Badiger
Updated On : 30 Jul 2013, 11:01 am

ಕನ್ನಡಪ್ರಭ ವಾರ್ತೆ, ಗದಗ, ಜು. 29
25 ದಿನಗಳಿಂದ ಕುಡಿವ ನೀರು ಬಿಡದೇ ಇರುವ ಹಿನ್ನೆಲೆಯಲ್ಲಿ ನಗರದ 32ನೇ ವಾರ್ಡ್‌ನ ನಿವಾಸಿಗಳು ಖಾಲಿಕೊಡಗಳನ್ನು ಹಿಡಿದು ನಗರದ ಮುಳಗುಂದ ನಾಕಾದಲ್ಲಿ 1 ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟಿಸಿದ ಘಟನೆ ಸೋಮವಾರ ಜರುಗಿದೆ.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಮರ್ಪಕವಾದ ಮಳೆಯಾಗದೇ ಜನತೆಯನ್ನು ಸಂಕಷ್ಟಕ್ಕೀಡು ಮಾಡಿರುವುದು ಒಂದೆಡೆಯಾದರೆ, ಮಲೆನಾಡಿನ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಎಡಬಿಡದ ಮಳೆಯಿಂದಾಗಿ ನದಿಗಳೆಲ್ಲ ಮೈದುಂಬಿ ಹರಿಯುತ್ತಿವೆ. ಅದೇ ರೀತಿ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವ ತುಂಗಭದ್ರಾ ನದಿ ಸಂಪೂರ್ಣವಾಗಿ ಭರ್ತಿಯಾಗಿ ಹರಿಯುತ್ತಿದೆ. ಆದರೆ, ಗದಗ-ಬೆಟಗೇರಿ ನಗರಕ್ಕೆ ಇನ್ನೂ ನೀರಿನ ಬವಣೆ ತಪ್ಪುತ್ತಿಲ್ಲ. ನದಿಯು ತುಂಬಿ ಹರಿಯುತ್ತಿದ್ದರೂ ನಗರಸಭೆಯ ಆಡಳಿತದ ವೈಫಲ್ಯದಿಂದಾಗಿ ಅವಳಿ ನಗರದ ಜನತೆಗೆ ಸಮರ್ಪಕ ನೀರು ಬಿಡುವಲ್ಲಿ ವಿಫಲವಾಗುತ್ತಿದೆ. ಈ ಮಳೆಗಾಲದ ದಿನದಲ್ಲಿಯೂ ದಿನೇ ದಿನೇ ನೀರಿನ ಬವಣೆ ಹೆಚ್ಚಾಗುತ್ತಿದೆ ವಿನಃ ಕಡಿಮೆಯಾಗುತ್ತಿಲ್ಲ.
25 ದಿನಗಳಿಂದ ನೀರಿಲ್ಲ: ಈಚೆಗೆ ಅಧಿಕಾರ ವಹಿಸಿದ ಸಚಿವ ಎಚ್.ಕೆ. ಪಾಟೀಲರು ಗದಗ-ಬೆಟಗೇರಿ ಅವಳಿ ನಗರಕ್ಕೆ ವಾರಕ್ಕೊಮ್ಮೆ ಕುಡಿವ ನೀರು ಬಿಡುವುದಾಗಿ ಆಶ್ವಾಸನೆ ನೀಡಿ, ಅವಳಿ ನಗರದಲ್ಲಿರುವ ಎಲ್ಲ ಟ್ಯಾಂಕ್‌ಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಭರದಿಂದ ಚಾಲನೆ ನೀಡಿದರು.
ಆದರೆ, ಅಂದುಕೊಂಡಂತೆಯೇ ಅದು ಯಶಸ್ವಿಯಾಗಿದ್ದಲ್ಲಿ ಇಂದು ಗದಗ-ಬೆಟಗೇರಿ ಅವಳಿ ನಗರಕ್ಕೆ ವಾರಕ್ಕೊಮ್ಮೆ ಸಮರ್ಪಕವಾಗಿ ಕುಡಿವ ನೀರು ಬರುತ್ತಿತ್ತು. ಆದರೆ, ಈಗ ಸಚಿವರು ಕೈಗೊಂಡ ಯೋಜನೆಗಳು ವಿಫಲತೆಯ ಹಾದಿ ಹಿಡಿದಿರುವುದಕ್ಕೆ 32ನೇ ವಾರ್ಡ್‌ನಲ್ಲಿ 25 ದಿನಗಳಿಂದ ನೀರಿಲ್ಲದೇ ಸಾರ್ವಜನಿಕರು ಸಂಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿ ಬಂದೊದಗಿದೆ.
ಈ ಕುರಿತು ನಗರಸಭೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ.
ಈಗಾಗಲೇ ವಾರ್ಡ್‌ನ ಸಾರ್ವಜನಿಕರು ಹಲವು ಬಾರಿ ನಗರಸಭೆಗೆ ಭೇಟಿ ನೀಡಿ ನೀರು ಸಮರ್ಪಕ ಪೂರೈಸುವಂತೆ ಆಗ್ರಹಿಸಿದರೂ ಇಲ್ಲಿಯ ವರೆಗೂ ನಗರಸಭೆಯ ಸಿಬ್ಬಂದಿ ನೀರು ಬಿಟ್ಟಿಲ್ಲ. 21 ದಿನಕ್ಕೆ 25 ದಿನಕ್ಕೆ ನೀರು ಬಿಡುತ್ತಿದ್ದು, ಅದು ಸಮರ್ಪಕವಾಗಿ ಬಿಡದೇ ಕಾಟಾಚಾರಕ್ಕೆ ನೀರನ್ನು ಬಿಡುತ್ತಿದ್ದಾರೆ. ಈ ವಾರ್ಡ್‌ನಲ್ಲಿ ಬಡವರು ವಾಸಿಸುತ್ತಿದ್ದು, ನಿತ್ಯ ಕೂಲಿ ಅರಸಿ ಬೇರೆಡೆ ದುಡಿಯಲು ಹೋಗುತ್ತಾರೆ. ಮನೆಯಲ್ಲಿ ಹೆಚ್ಚಾಗಿ ಚಿಕ್ಕ ಮಕ್ಕಳು, ವೃದ್ಧರು ವಾಸಿಸುತ್ತಿದ್ದು, 20-25 ದಿನಗಳಿಂದ ನೀರು ಬಿಡದೇ ಇರುವುದರಿಂದ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಎದುರಾಗಿದೆ.
ಸ್ಥಳಕ್ಕೆ ಆಗಮಿಸಿದ ಗದಗ-ಬೆಟಗೇರಿ ನಗರಸಭೆಯ ಕಿರಿಯ ಅಭಿಯಂತರ ಎಚ್.ಬಿ. ಬಂಡಿವಡ್ಡರ ಪ್ರತಿಭಟನಾಕಾರರನ್ನು ಉದ್ದೇ ಶಿಸಿ ಮಾತನಾಡಿ, ಕೆಲವು ದಿನಗಳಿಂದ ಈ ವಾರ್ಡ್‌ನಲ್ಲಿ ಕೆಲವು ಕಡೆಗಳಲ್ಲಿ ಪೈಪ್‌ಲೈನ್ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಕುಡಿವ ನೀರು ಪೂರೈಸುವಲ್ಲಿ ವಿಳಂಬವಾಗಿದೆ. ಈ ಕೂಡಲೇ 32ನೇ ವಾರ್ಡ್‌ಗೆ ಟ್ಯಾಂಕರ್ ಮೂಲಕ ಸಮರ್ಪಕ ಕುಡಿವ ನೀರನ್ನು ಪೂರೈಸಲಾಗುವುದು ಎಂಬ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. 1 ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಗದಗ-ಹುಬ್ಬಳ್ಳಿಯ ಪ್ರಮುಖ ರಸ್ತೆಯಲ್ಲಿ ನೂರಾರು ವಾಹನಗಳು ರಸ್ತೆಯ ಮಧ್ಯದಲ್ಲಿಯೇ ನಿಲ್ಲುವಂತಾಯಿತು. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯುಂಟಾಯಿತು. ಪ್ರತಿಭಟನೆಯ ನಂತರ ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡಲು ಸಂಚಾರಿ ಪೊಲೀಸರು ಪ್ರಯಾಸ ಪಡುವಂತಾಯಿತು. ಸಾವಿತ್ರಿಬಾಯಿ ಬಾಕಳೆ, ಸುಮಿಕ್ರಾ ಬಾಕಳೆ, ಮಿತ್ರಾ ಪವಾರ, ರುಕ್ಮಿಣಿ ರಾಯಬಾಗಿ, ಶಕುಂತಲಾಬಾಯಿ, ನಿರ್ಮಲಾ ಕಲಬುರ್ಗಿ, ಸಾವಿತ್ರಿ, ದೀಪಾ ಬಸವಾ, ಲಕ್ಷ್ಮೀ ಹಬೀಬ, ಗಣಪತಿ ಜಿತೂರಿ, ದತ್ತು ಬಾಂಡಗೆ, ಶಂಕರ ಶಿದ್ಲಿಂಗ್, ಮಿಥುನ್ ಶಿದ್ಲಿಂಗ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement