ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಜ್ಜನರ ಸ್ನೇಹ ಮಾಡಿ: ಶ್ರೀಗಳು

Lingaraj Badiger
Updated On : 30 Jul 2013, 11:01 am

ಕನ್ನಡಪ್ರಭ ವಾರ್ತೆ, ಗದಗ, ಜು. 29
ಬದುಕು ನಂದನವನವಾಗಿ ನಿರ್ಮಾಣಗೊಳ್ಳಲು ಅಧ್ಯಾತ್ಮದ ಅರಿವು ಮತ್ತು ಸಜ್ಜನರ ಒಡನಾಟ ಮುಖ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಜ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ಪಟ್ಟರು.
ಅವರು ಭಾನುವಾರ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರ 44ನೇ ಪುಣ್ಯಾರಾಧನೆಯ ಅಂಗವಾಗಿ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನ ಶಾಶ್ವತವಲ್ಲ. ಸಿರಿಸಂಪದಗಳು ಶಾಶ್ವತವಲ್ಲ. ನಾವು ಮಾಡಿದ ಒಳ್ಳೆಯ ಕಾರ್ಯಗಳು ನೆನಪಿನಲ್ಲಿ ಉಳಿಯುತ್ತವೆ. ಅಳಿಯುವುದು ಕಾಯ ಉಳಿಯುವುದು ಕೀರ್ತಿ ಎಂದು ಮಹಾನುಭಾವರು ಸಾರಿದ್ದಾರೆ. ಹುಟ್ಟು ಸಹಜ ಸಾವು ನಿಶ್ಚಿತ. ಹುಟ್ಟು ಸಾವುಗಳ ಮಧ್ಯೆ ಇರುವ ಜೀವನ ಸಮೃದ್ಧಗೊಳ್ಳಲು ಎಲ್ಲರೂ ಶ್ರಮಿಸಬೇಕಾಗುತ್ತದೆ. ಹೃದಯದ ಭೂಮಿಯಲ್ಲಿ ಶಿವಜ್ಞಾನ ಬಿತ್ತಿ ಬದುಕನ್ನು ಬೆಳಗಿಸುವುದೇ ಶ್ರೀಗುರುವಿನ ಧರ್ಮ. ಜೀವನದಲ್ಲಿ ಏನೇ ಏರಿಳಿತಗಳೂ ಬಂದರೂ ಸಮಚಿತ್ತದಿಂದ ಬಾಳಿಬದುಕಿದಾಗ ಜೀವನ ಸಾರ್ಥಕಗೊಳ್ಳುವುದು. ಲಿಂ. ವೀರಭದ್ರ ಶಿವಾಚಾರ್ಯರ ತ್ಯಾಗ-ತಪಸ್ಸು-ಔದಾ ರ್ಯ ಮತ್ತು ಭಕ್ತ ಸಮುದಾಯದ ಮೇಲಿಟ್ಟಿರುವ ಅಭಿಮಾನ ಅವಿಸ್ಮರಣೀಯವಾಗಿತ್ತು ಎಂದು ನೆನಪಿಸಿದರು. ಅವರ ಆದರ್ಶ ಚಿಂತನಗಳು ಜನಮನವನ್ನು ಪಾವನಗೊಳಿಸಲಿ ಎಂದರು. ಶಾಸಕ ಜಿ.ಎಸ್. ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು.
ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಬದಾಮಿಯ ಶಿವಪೂಜಾ ಶಿವಾಚಾರ್ಯರು ಪಾಲ್ಗೊಂಡು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ರಂಭಾಪುರಿ ಶ್ರೀಗಳು ಸಂಗಯ್ಯ ರಾಟೀಮನಿ ಮತ್ತು ಮಲ್ಲಪ್ಪ ಮ್ಯಾಗೇರಿ ಇವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಿದರು. ಮಠಾಧ್ಯಕ್ಷ ಸೋಮಶೇಖರ ಶಿವಾಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ಲಿಂ. ವೀರಭದ್ರ ಶಿವಾಚಾರ್ಯರ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವವು ಗ್ರಾಮದಲ್ಲಿ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement