ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಆಸರೆ ಸಿದ್ಧವಾದರೂ ತಪ್ಪಲಿಲ್ಲ ಹಳೆಮನೆ ವಾಸ

Lingaraj Badiger
Updated On : 31 Jul 2013, 11:01 am

ಕನ್ನಡಪ್ರಭ ವಾರ್ತೆ, ಗದಗ, ಜು. 30
ಆಸರೆ ಮನೆಗಳು ಸಿದ್ಧಗೊಂಡಿವೆ. ಆದರೆ, ಈ ಊರಲ್ಲಿ ಪ್ರವಾಹ ಸಂತ್ರಸ್ತರಿಗೆ ಮಾತ್ರ ತಪ್ಪಿಲ್ಲ ಹಳೆ ಮನೆ ವಾಸ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಸಾರ್ವಜನಿಕರು ತಮ್ಮ ಹಳೆಯ ಮನೆಯಲ್ಲಿಯೇ ಕಾಲ ಕಳೆಯುವಂತಹ ಸ್ಥಿತಿ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಿರ್ಮಾಣವಾಗಿದೆ.  
ಆಸರೆ ಮನೆಗಳು ನಿರ್ಮಾಣವಾಗಿದ್ದರೂ ಅಲ್ಲಿಗೆ ಸಾರ್ವಜನಿಕರು ಹೋಗುತ್ತಿಲ್ಲ ಎನ್ನುವುದು ಎಲ್ಲೆಡೆ ಕೇಳಿ ಬರುತ್ತಿರುವ ಮಾತಾಗಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಗಾಡಗೋಳಿ ಗ್ರಾಮಸ್ಥರು ನಮಗೆ ಆಸರೆ ಮನೆ ನೀಡಿ ಎಂದು ಅಂಗಲಾಚಿದರೂ ಅಧಿಕಾರಿಗಳು ಮಾತ್ರ ಗಮನ ನೀಡುತ್ತಿಲ್ಲ.
ಅವಾಂತರ: ಗದಗ ಜಿಲ್ಲೆಯ ಗಾಡಗೋಳಿ ಗ್ರಾಮವು ಮಲಪ್ರಭಾ ನದಿ ದಡದಲ್ಲಿದ್ದು, 2007 ಹಾಗೂ 2009ರ ಪ್ರವಾಹದಲ್ಲಿ ತತ್ತರಿಸಿ ಹೋಗಿತ್ತು. ಗ್ರಾಮಸ್ಥರ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರ ಆಸರೆ ಯೋಜನೆಯಡಿ ಈ ಗ್ರಾಮಕ್ಕಾಗಿಯೇ 504 ಮನೆಗಳನ್ನು ನಿರ್ಮಿಸಿದೆ. ಗಾಡಗೋಳಿಯಲ್ಲಿರುವುದೇ 410 ಕುಟುಂಬಗಳು.ಹೆಚ್ಚಿನ ಮನೆಗಳು ನಿರ್ಮಾಣವಾಗಿದ್ದರೂ ಅವು ಅರ್ಹರಿಗೆ ಇಂದಿಗೂ ತಲುಪಿಲ್ಲ.
ಮನೆ ನಿರ್ಮಾಣ ಪೂರ್ಣಗೊಳ್ಳುತ್ತಿದ್ದಂತೆ ಹಂಚಿಕೆ ಕುರಿತು ಸಾಕಷ್ಟು ಗೊಂದಲ ಉಂಟಾಯಿತು. ಕೆಲವರು 2007ರ ಪೂರ್ವದಲ್ಲಿ ಗ್ರಾಪಂನಲ್ಲಿರುವ ದಾಖಲಾತಿ ಆಧಾರದಲ್ಲಿ ಮನೆಗಳನ್ನು ನೀಡಬೇಕು ಎಂದು ಪಟ್ಟುಹಿಡಿದರು. ಮತ್ತೆ ಕೆಲವರು 2007ರ ಪ್ರವಾಹಕ್ಕಿಂತ 2009ರ ಪ್ರವಾಹ ತೀವ್ರವಾಗಿತ್ತು. ಹಾಗಾಗಿ 2009 ರಲ್ಲಿ ಗ್ರಾಮ ಪಂಚಾಯಿತಿ ದಾಖಲೆಗಳ ಆಧಾರದಲ್ಲಿ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು ಕೇಳಿಕೊಂಡರು. ಈ ಎಲ್ಲ ಗೊಂದಲವೇ ಇಂದು ಫಲಾನುಭವಿಗಳಿಗೆ ಮನೆ (ಹಕ್ಕುಪತ್ರ) ಹಂಚಿಕೆಯಾಗುವಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಅಧಿಕಾರಿಗಳು ತೆಪ್ಪಗೆ ಕುಳಿತಿದ್ದು, ನೈಜ ಫಲಾನುಭವಿಗಳು ಮಾತ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹಳೆ ಮನೆಯಲ್ಲೇ ವಾಸ: ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತು ಇಲ್ಲಿ ನಿಜವೆನಿಸುತ್ತದೆ. ಇಂದಿಲ್ಲ, ನಾಳೆ ನಮಗೆ ಹೊಸ ಗ್ರಾಮದಲ್ಲಿ ಮನೆ ಬರುತ್ತದೆ ಎಂದು ನಂಬಿಕೊಂಡು, ತಮ್ಮ ಮನೆಗಳನ್ನು ದುರಸ್ತಿ ಮಾಡಿಸದೇ ಹಳೆಯ ಮನೆಯಲ್ಲಿಯೇ ಇಂದಿಗೂ ವಾಸವಾಗಿದ್ದಾರೆ.
ಆತಂಕದಲ್ಲೇ ಜೀವನ: ಅಂದಿನ ಪ್ರವಾಹದಲ್ಲಿ ಸಂಪೂರ್ಣ ನೆನೆದು ಹೋಗಿರುವ ಮನೆಗಳು ಈಗಲೋ, ಆಗಲೋ ಬೀಳುವಂತಹ ಸ್ಥಿತಿಯಲ್ಲಿವೆ. ಅದೇ ಮನೆಗಳಲ್ಲಿಯೇ ಸಂತ್ರಸ್ತರು ವಾಸವಾಗಿದ್ದಾರೆ. ಈಚೆಗೆ ಇದೇ ಗ್ರಾಮದ ಯಚ್ಚರಪ್ಪ ಸೊಲಗಿ ಎನ್ನುವವರ ಮನೆ ಅಲ್ಪ ಮಳೆಗೆ ಸಂಪೂರ್ಣ ಬಿದ್ದು ಹೋಗಿದೆ. ಈ ಘಟನೆಯಲ್ಲಿ ಒಂದು ಎಮ್ಮೆ ಮೃತಪಟ್ಟಿದ್ದು, ಇನ್ನೊಂದು ಎಮ್ಮೆ ಸಾಯುವ ಸ್ಥಿತಿಯಲ್ಲಿದೆ. ಇದು ಕೇವಲ ಒಂದು ಕುಟುಂಬದ ತೊಂದರೆಯಲ್ಲ. ಇದೇ ಗ್ರಾಮದ ಹಲವಾರು ಕುಟುಂಬಗಳು ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೂಡಲೇ ಜಿಲ್ಲಾಡಳಿತ ಅಗತ್ಯವಿರುವ ಬಡವರಿಗಾದರೂ ಮನೆಗಳನ್ನು ಹಂಚಿಕೆ ಮಾಡಿ ಅವರ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸಬೇಕಿದೆ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement