ಇಂದು ಪತ್ರಕರ್ತರ ದಿನಾಚರಣೆ ಕಾರ್ಯಕ್ರಮ
ಶಿಗ್ಗಾಂವಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮ ಜು. 31ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಮಾಮ್ಲೇದೇಸಾಯಿ ಪದವಿಪೂರ್ವ ಕಾಲೇಜಿನ ಆವರಣದಲಿ ಜರುಗಲಿದೆ. ವಿರಕ್ತಮಠದ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚವಡಿ ಉದ್ಘಾಟಿಸುವರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಹಿರೇಮಠ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ವಿಜಯ ಹೂಗಾರ, ನಿವೃತ್ತ ಪ್ರಾಚಾರ್ಯ, ಸಾಹಿತಿ ಎಸ್.ವಿ. ದೇಶಪಾಂಡೆ, ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ಮಾಮ್ಲೇದೇಸಾಯಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ವಿ. ರಾಯ್ಕರ, ಉಪಪ್ರಾಚಾರ್ಯ ಜಿ.ಎನ್. ಯಲಿಗಾರ ಆಗಮಿಸುವರು. ತಾಲೂಕಿನ ಪತ್ರಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಸಂಘದ ಕಾರ್ಯದರ್ಶಿ ಮಹೇಶ ಹೆಸರೂರ ಪ್ರಕಟನೆಯಲ್ಲಿ ಕೋರಿದ್ದಾರೆ.
ಬೆಳೆ ವಿಮೆ ಮಾರ್ಗಸೂಚಿ
ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಸರ್ಕಾರ ಮುಂದುವರಿಸಿದ್ದು, ಹಾವೇರಿ ಜಿಲ್ಲೆಯ 7 ಕಸಬಾ ಮತ್ತು 12 ಇತರೆ ಹೋಬಳಿಗಳಲ್ಲಿ ಜಾರಿಯಾಗಿದೆ. ಬೆಳೆಸಾಲ ಪಡೆಯುವ ರೈತರಿಗೆ ವಿಮೆ ಕಡ್ಡಾಯ. ಮಳೆ ಆಶ್ರಿತ ರಾಗಿ, ಮುಸುಕಿನ ಜೋಳ, ಜೋಳ, ತೊಗರಿ, ಉದ್ದು, ಹೆಸರು, ಸೋಯಾ ಅವರೆ, ಸೂರ್ಯಕಾಂತಿ ಮತ್ತು ಶೇಂಗಾ ಬೆಳೆಗಳನ್ನು ವಿಮೆಗೆ ಒಳಪಡಿಸಬೇಕು. ಬೆಳೆ ಸಾಲ ಪಡೆಯದ ರೈತರು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಪೈಕಿ ಒಂದನ್ನು ಆಯ್ದುಕೊಳ್ಳಬಹುದು. ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಾದ ನೀರಾವರಿ ಹಾಗೂ ಮಳೆ ಆಶ್ರಿತ ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಆಲೂಗೆಡ್ಡೆ, ದ್ರಾಕ್ಷಿ ಮತ್ತು ಬಾಳೆ ಇವುಗಳನ್ನು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಳವಡಿಸಲಾಗಿದೆ. ನೋಂದಣಿಗೆ ಜು. 31 ಕಡೆಯ ದಿನಾಂಕ. ಆಸಕ್ತರು ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ, ವಾಣಿಜ್ಯ ಹಾಗೂ ಗ್ರಾಮೀಣ ಬ್ಯಾಂಕ್, ಪ್ರಾಥಮಿಕ ಕೃಷಿ ಸಹಕಾರಿ ಸಂಘ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು.
ಯೋಗ ವಿಜ್ಞಾನ ಶಿಬಿರ
ರೋಣ: ಪಟ್ಟಣದ ಬಸಮ್ಮ ಸಂಗನಗೌಡ ಪಾಟೀಲ್ ಅವರ 9ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಸ್ಮರಣೋತ್ಸವ ಸಮಿತಿ ಆಶ್ರಯದಲ್ಲಿ ಆರ್‌ಜಿಇಎಸ್ ಕಾಲೇಜು ಆವರಣದಲ್ಲಿ ಭಾನುವಾರ ಬೆಳಗ್ಗೆ ಯೋಗಗುರು ವಚನಾನಂದ ಗುರೂಜಿ ಅವರ ಯೋಗ ವಿಜ್ಞಾನ ಶಿಬಿರ ನಡೆಯಿತು. ಶಾಸಕ ಜಿ.ಎಸ್. ಪಾಟೀಲ್, ರಾಜ್ಯ ಬೀಜ ನಿಗಮ ನಿರ್ದೇಶಕ ಐ.ಎಸ್. ಪಾಟೀಲ, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಖಾತ್ರಿ ಉದ್ಯೋಗಕ್ಕಾಗಿ ನರಗುಂದ ತಾಪಂ ಮುಂದೆ ಧರಣಿ
ನರಗುಂದ: ರಡ್ಡೇರ-ನಾಗನೂರು ಹಾಗೂ ಸುರಕೋಡ ಗ್ರಾಮಸ್ಥರು ಗ್ರಾಪಂನವರು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಎನ್‌ಆರ್‌ಇಜಿಎ ಮೂಲಕ ಗ್ರಾಮಸ್ಥರಿಗೆ ಕೆಲಸ ನೀಡದೇ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ, ತಾಪಂ ಮುಂದೆ ಕುಟುಂಬ ಸಮೇತರಾಗಿ ಆಗಮಿಸಿ ಧರಣಿ ನಡೆಸಿದರು. ತಾಲೂಕಿನ 12 ಗ್ರಾಪಂಗಳಲ್ಲಿ ಬಹು ದಿನಗಳಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದ್ದರೂ ಮೇಲಧಿಕಾರಿಗಳು ಕ್ರಮ ಕೈಗೊಂಡಿಲ್ಲ. ರಡ್ಡೇರ-ನಾಗನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪುರುಷ ಸ್ವ-ಸಹಾಯ ಸಂಘದವರು ಗ್ರಾಪಂ ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮದಲ್ಲಿ ಸಮರ್ಪಕ ಮಳೆಯಾಗದೇ ರೈತರು ತೊಂದರೆ ಅನುಭವಿಸುತ್ತಿದ್ದು, ಕೂಲಿಕಾರರಿಗೆ ನರೇಗಾ ಮೂಲಕ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಈ ಸಾಲಿನಲ್ಲಿ 8 ದಿನಗಳ ಕೆಲಸ ನೀಡಲಾಗಿದೆ. ಇನ್ನುಳಿದ ದಿನಗಳ ಉದ್ಯೋಗ ನೀಡುವಂತೆ ಕೇಳಿದರೆ, ಗ್ರಾಪಂನವರು ಈ ವರ್ಷದ ಅನುದಾನ ಅಷ್ಟೇ ಇದೆ. ನಿಮಗೆ ಒಂದು ವಾರದವರೆಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಚಂದಪ್ಪ ಚಲವಾದಿ, ಭೀಮಪ್ಪ ನೀರಲಗಿ, ಶೇಖಪ್ಪ ಚಲವಾದಿ, ಪುಂಡಲಿಕ್ಕಪ್ಪ ದಾಸರ, ಯಮನಪ್ಪ ಚಲವಾದಿ, ದುರಗಪ್ಪ ಚಲವಾದಿ, ಕಲ್ಲಪ್ಪ ದೊಡಮನಿ, ಪಾರವ್ವ ದಳವಾಯಿ, ಮಲವ್ವ ಚಳವಾದಿ, ಗಂಗವ್ವ ಚಳವಾದಿ, ಕಸ್ತೂರೆವ್ವ ಚಲವಾದಿ, ಮಲ್ಲವ್ವ ಮಾದರ, ರೇಣುವ್ವ ಚಲವಾದಿ, ಶಿವಾನಂದ ಮಾದರ, ಜಗದೀಶ ಮಾದರ, ಮಲ್ಲಪ್ಪ ಮಾದರ, ಬಸಪ್ಪ ಮಾದರ, ಬಸಪ್ಪ ಪೂಜಾರ ಇದ್ದರು.