ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಲ್ಲಿ ಇನ್ನೂ ಈಶ್ವರಪ್ಪ ಡಿಸಿಎಂ!

Lingaraj Badiger
Updated On : 31 Jul 2013, 11:11 am

ಗದಗ: ರಾಜ್ಯದಲ್ಲಿ ಹೊಸ ಸರ್ಕಾರ ಬಂದು 3 ತಿಂಗಳು ಕಳೆಯುತ್ತಾ ಬಂದರೂ ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪಪಂನವರಿಗೆ ಮಾತ್ರ ಇಂದಿಗೂ ಕೆ.ಎಸ್. ಈಶ್ವರಪ್ಪನವರೇ ಉಪಮುಖ್ಯಮಂತ್ರಿ ಇದ್ದಂತಿದೆ.
ನರೇಗಲ್ಲ ಪಪಂನ ಹೊರಾಂಗಣದಲ್ಲಿ ಬೃಹದಾಕಾರದಲ್ಲಿ ಹಾಕಲಾಗಿರುವ ಫ್ಲೆಕ್ಸ್‌ನಲ್ಲಿ ಇಂದಿಗೂ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಂಬ ಹೆಸರು ಕಾಣಸಿಗುತ್ತಿದೆ. ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಕುರಿತು ಹಾಗೂ ಚುನಾಯಿತ ಪ್ರತಿನಿಧಿಗಳ ಕಟೌಟ್, ಬ್ಯಾನರ್‌ಗಳನ್ನು ಹಾಕುವುದು ಸಾಮಾನ್ಯ. ಆದರೆ, ಬೇರೆ ಸರ್ಕಾರಗಳು ಬಂದಾಗ ಅವುಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ, ನರೇಗಲ್ಲ ಪಪಂನ ಅಧಿಕಾರಿಗಳಿಗೆ ಮಾತ್ರ ಇದು ಕಾಣದೇ ಹೋಗಿರುವುದು ವಿಪರ್ಯಾಸ. ಪಟ್ಟಣ ಪಂಚಾಯಿತಿ ಮುಖ್ಯ ದ್ವಾರದ ಬಳಿಯೇ ರಾಜ್ಯದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎನ್ನುವ ಫಲಕವು ಅಲ್ಲಿಗೆ ತೆರಳಿದ ಪ್ರತಿಯೊಬ್ಬರನ್ನೂ ಸ್ವಾಗತಿಸುತ್ತಿದೆ.
ಜನರಲ್ಲಿ ಗೊಂದಲ: ಫ್ಲೆಕ್ಸ್ ನೋಡುವವರಿಗೆ ತೀವ್ರ ಗೊಂದಲ ಸೃಷ್ಟಿಸುತ್ತದೆ. ಅದರಲ್ಲಿಯೂ ವಿದ್ಯಾರ್ಥಿಗಳಲ್ಲಂತೂ ಸಾಕಷ್ಟು ಚರ್ಚೆಯನ್ನುಂಟು ಮಾಡುತ್ತದೆ. ದಿನವೂ ಇದೇ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಕೆಲ ವಿದ್ಯಾರ್ಥಿಗಳು ಇದನ್ನು ಕಂಡು ಈಗ ನಮ್ಮ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಇಲ್ಲ. ಆದರೆ, ಇಲ್ಲಿ ಈಶ್ವರಪ್ಪನವರೇ ಉಪಮುಖ್ಯಮಂತ್ರಿ ಎಂದು ಹಾಕಿದ್ದಾರೆ. ಇದನ್ನು ಯಾಕೆ ಇನ್ನೂ ತೆರವುಗೊಳಿಸಿಲ್ಲ ಎಂದು ತಮ್ಮ ತಮ್ಮಲ್ಲೇ ಚರ್ಚೆ ಮಾಡುತ್ತಾ ಅಧಿಕಾರಿಗಳನ್ನು ದೂರುತ್ತಾ ಸಾಗುತ್ತಾರೆ. ಆದರೆ, ವಿದ್ಯಾರ್ಥಿಗಳಿಗಿರುವಷ್ಟು ತಿಳಿವಳಿಕೆ ಅಧಿಕಾರಿಗಳಿಗೆ ಇಲ್ಲದಿರುವುದು ದುರದೃಷ್ಟಕರ.
ನಿರ್ಲಕ್ಷ್ಯಕ್ಕೆ ಸಾಕ್ಷಿ: ನರೇಗಲ್ಲ ಪಪಂನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಈಗಾಗಲೇ ಜಗಜ್ಜಾಹೀರವಾಗಿರುವ ವಿಷಯ. ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಈ ಫ್ಲೆಕ್ಸ್. ಅದು ಕೇವಲ ಅಭಿವೃದ್ಧಿ ಕಾಮಗಾರಿಗಳನ್ನು ಬಿತ್ತರಿಸುವ ಜಾಹೀರಾತು ಫಲಕವಾದರೇ ಯಾವುದೇ ತೊಂದರೆ ಇಲ್ಲ. ಆದರೆ ಅದರಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳ ಬಗ್ಗೆ ತಿಳಿಸಲಾಗಿದೆ. ಇದು ಈ ಹಿಂದಿನ ಸರ್ಕಾರ ಅವಧಿಯಲ್ಲಿ ಹಾಕಲಾಗಿರುವ ಫ್ಲೆಕ್ಸ್. ಆದರೆ ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅಂತಹ ಕೆಲಸಗಳು ಮಾತ್ರ ಇಲ್ಲಿ ನಡೆಯುತ್ತಿಲ್ಲ.
-ಅಜೀಜಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement