ಉದ್ಯೋಗಕ್ಕಾಗಿ ತಾಪಂ ಮುಂದೆ ಧರಣಿ
ನರಗುಂದ: ತಾಲೂಕಿನ ರಡ್ಡೇರ-ನಾಗನೂರು ಹಾಗೂ ಸುರಕೋಡ ಗ್ರಾಮಸ್ಥರು ಗ್ರಾಪಂನವರು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಎನ್‌ಆರ್‌ಇಜಿಎ ಮೂಲಕ ಗ್ರಾಮಸ್ಥರಿಗೆ ಸರಿಯಾಗಿ ಉದ್ಯೋಗ ನೀಡದೇ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ, ತಾಪಂ ಮುಂದೆ ಕುಟುಂಬ ಸಮೇತರಾಗಿ ಆಗಮಿಸಿ ಧರಣಿ ನಡೆಸಿದರು.
ತಾಲೂಕಿನ 12 ಗ್ರಾಪಂಗಳಲ್ಲಿ ಬಹು ದಿನಗಳಿಂದ ಈ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದರೂ ಸಂಬಂಧಪಟ್ಟ ಮೇಲಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ರಡ್ಡೇರ-ನಾಗನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪುರುಷ ಸ್ವ-ಸಹಾಯ ಸಂಘದವರು ಗ್ರಾಪಂ ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮದಲ್ಲಿ ಸಮರ್ಪಕ ಮಳೆಯಾಗದೇ ರೈತರು ತೊಂದರೆ ಅನುಭವಿಸುತ್ತಿದ್ದು, ಹಾಗಾಗಿ ಗ್ರಾಮದಲ್ಲಿನ ಕೂಲಿಕಾರರಿಗೆ ಎನ್.ಆರ್.ಇ.ಜಿ.ಎ. ಮೂಲಕ ಉದ್ಯೋಗ ನೀಡುವಂತೆ ಕೋರಿದರೆ, ಅವರು ಇದು ತಮಗೆ ಸಂಬಂಧಿಸದ ವಿಷಯ ಎನ್ನುವಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. 2013-14ನೇ ಸಾಲಿನಲ್ಲಿ ಕೇವಲ 8 ದಿನಗಳ ಉದ್ಯೋಗವನ್ನು ನೀಡಲಾಗಿದೆ. ಇನ್ನುಳಿದ ದಿನಗಳ ಉದ್ಯೋಗ ನೀಡುವಂತೆ ಕೇಳಿದರೆ, ಗ್ರಾಪಂನವರು ಈ ವರ್ಷದ ಅನುದಾನ ಅಷ್ಟೇ ಇದೆ. ಹಾಗಾಗಿ ನಿಮಗೆ ಒಂದು ವಾರದವರೆಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಚಂದಪ್ಪ ಚಲವಾದಿ, ಭೀಮಪ್ಪ ನೀರಲಗಿ, ಶೇಖಪ್ಪ ಚಲವಾದಿ, ಪುಂಡಲಿಕ್ಕಪ್ಪ ದಾಸರ, ಯಮನಪ್ಪ ಚಲವಾದಿ, ದುರಗಪ್ಪ ಚಲವಾದಿ, ಕಲ್ಲಪ್ಪ ದೊಡಮನಿ, ಪಾರವ್ವ ದಳವಾಯಿ, ಮಲವ್ವ ಚಳವಾದಿ, ಗಂಗವ್ವ ಚಳವಾದಿ, ಕಸ್ತೂರೆವ್ವ ಚಲವಾದಿ, ಮಲ್ಲವ್ವ ಮಾದರ, ರೇಣುವ್ವ ಚಲವಾದಿ, ಶಿವಾನಂದ ಮಾದರ, ಜಗದೀಶ ಮಾದರ, ಮಲ್ಲಪ್ಪ ಮಾದರ, ಬಸಪ್ಪ ಮಾದರ, ಬಸಪ್ಪ ಪೂಜಾರ ಮುಂತಾದವರು ಉಪಸ್ಥಿತರಿದ್ದರು.