ಗದಗ ಸಾಂಸ್ಕೃತಿಕ ಲೋಕದ ತೊಟ್ಟಿಲು
ಕನ್ನಡಪ್ರಭ ವಾರ್ತೆ, ಗದಗ, ಜು. 30
ಸಾಹಿತ್ಯ, ಸಂಗೀತ, ನಾಟಕ, ಕಲೆ, ಧಾರ್ಮಿಕ, ವಾಸ್ತುಶಿಲ್ಪ, ಸಹಕಾರ, ವ್ಯಾಪಾರ, ರಾಜಕೀಯ, ಕೃಷಿ, ಕೋಮು ಸೌಹಾರ್ದತೆ, ಭಾವೈಕ್ಯ, ಪರಂಪರೆ ಮತ್ತು ದಾನಕ್ಕೆ ಹೆಸರಾಗಿರುವ ಗದಗ ಸಾಂಸ್ಕೃತಿಕ ಲೋಕದ ತೊಟ್ಟಿಲಾಗಿದೆ ಎಂದು ಜೆ.ಟಿ. ಕಾಲೇಜಿನ ನಿವೃತ್ತ ಪ್ರಾ. ಜೆ.ಎಂ. ರೇವಡಿಹಾಳ ಹೇಳಿದರು.
ಈಚೆಗೆ ಅವರು ಸ್ಥಳೀಯ ತಾಪಂ ಆವರಣದಲ್ಲಿ ಜಿಲ್ಲಾ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ-31ರಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ಗದಗ ಸಾಮಾನ್ಯವಾಗಿ ಎರೆಭೂಮಿ ಹೊಂದಿದ್ದು, ಅಲ್ಪ ಸ್ವಲ್ಪ ಮಸಾರಿ ಭೂಮಿಯನ್ನು ಹೊಂದಿರುವ ಗದಗ ಕರ್ನಾಟಕದ ಈಜಿಪ್ತ ಆಗಿತ್ತು. ಇಲ್ಲಿ ಹತ್ತಿ ಮತ್ತು ಜೋಳ ಹೇರಳವಾಗಿ ಬೆಳೆಯಲಾಗುತ್ತಿತ್ತು. ಇಂತಹ ಕ್ಷೇತ್ರದಲ್ಲಿ ಗದುಗಿನ ಭಾರತ ರಚಿಸಿದ ಕೋಳಿವಾಡದ(ಕುಮಾರವ್ಯಾಸ) ನಾರಾಯಣಪ್ಪನಿಂದ ಆದಿಯಾಗಿ ಹಲವಾರು ಕವಿಗಳು, ಸಾಹಿತಿಗಳು, ನಾಟಕಕಾರರಾದ ಗರುಡ ಸದಾಶಿವರಾಯರು, ಪತ್ತಾರ ಮಾಸ್ತರ, ಎಚ್.ಎನ್. ಹೂಗಾರ, ಎಚ್.ಟಿ. ಮಹಾಂತೇಶ ಶಾಸ್ತ್ರಿಗಳು, ಸುಶೀಲೇಂದ್ರ ಜೋಶಿ, ಆರ್.ಎನ್. ಕುಲಕರ್ಣಿ, ಚಿತ್ರಕಲಾವಿರಾದ ಎಂ.ವಿ. ಚಟ್ಟಿ, ಟಿ.ಪಿ. ಅಕ್ಕಿ, ಸಂಗೀತ ಕ್ಷೇತ್ರದಲ್ಲಿ ಗಾನಯೊಗಿ ಪಂಡಿತ ಡಾ. ಪುಟ್ಟರಾಜ ಗವಾಯಿಗಳು, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪಂಡಿತ ಭೀಮಸೇನ್ ಜೋಶಿ, ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಸ್ಮರಣೀಯ ಕೊಡುಗೆ ನೀಡಿದ ಕೋಮು ಸೌಹಾರ್ದ ಪ್ರಶಸ್ತಿ ಪುರಸ್ಕೃತ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ದಾನದಲ್ಲಿ ಬಸರಿಗಿಡದ ವೀರಪ್ಪನವರು, ಭೂಮರಡ್ಡಿ, ವಿಮರ್ಶಾ ಕ್ಷೇತ್ರದಲ್ಲಿ ಕೀರ್ತಿನಾಥ ಕುರ್ತಕೋಟಿ, ಎನ್.ಕೆ. ಕುಲಕರ್ಣಿ, ಕ್ರೀಡೆಯಲ್ಲಿ ರಾಜು ಬಗಾಡೆ, ಸುನೀಲ ಜೋಶಿ, ಹಾಗೂ ಹಲವಾರು ಮಹನೀಯರು ಗದುಗಿನ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಹೆಚ್ಚಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡರ, ಕೋಶಾಧ್ಯಕ್ಷ ಡಿ.ಎಚ್. ಮಲ್ಲೇಶ, ತಾಲೂಕು ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಪ್ರಾ. ಕೆ.ಎಚ್. ಬೇಲೂರ, ಸಾಹಿತಿ ರಾಜಶೇಖರಯ್ಯ ಕಾಲವಾಡಮಠ, ಆರ್.ಜಿ. ಚಿಕ್ಕಮಠ, ಡಾ. ರಾಜೇಂದ್ರ ಗಡಾದ, ದತ್ತಪ್ರಸನ್ನ ಪಾಟೀಲ, ಜಗದೀಶ ರೇವಡಿಹಾಳ, ವಿಶ್ವನಾಥ ಕಮ್ಮಾರ, ಎಸ್.ಎಫ್. ಹಡಪದ, ಎಂ.ಕೆ. ಅಡ್ನೂರ, ಪ್ರಕಾಶ ಗಿಡ್ಡಣ್ಣವರ, ಶರಣಪ್ಪ ಹೊಸಂಗಡಿ ಮುಂತಾದವರು ಇದ್ದರು. ತಾಲೂಕು ಕಸಾಪ ಅಧ್ಯಕ್ಷ ಕಿಶೋರ ಬಾಬು ನಾಗರಕಟ್ಟಿ ಸ್ವಾಗತಿಸಿದರು. ಪ್ರೊ. ಆರ್.ಎನ್. ಸಜ್ಜಗಾರ ನಿರೂಪಿಸಿದರು. ಜಿಲ್ಲಾ ಪ್ರತಿನಿಧಿ ಮಲ್ಲಿಕಾರ್ಜುನ ಪೂಜಾರ ವಂದಿಸಿದರು.