ನಾಳೆ ಪರಿಸರ ದಿನಾಚರಣೆ
ಗದಗ: ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಗಸ್ಟ್ 1 ರಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಆವರಣದಲ್ಲಿ 2013-14ನೇ ಸಾಲಿನ ಇಕೋ ಕ್ಲಬ್, ಪಠ್ಯೇತರ ಚಟುವಟಿಕೆ ಉದ್ಘಾಟನೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಗ ವಹಿಸುವರು. ಉದ್ಘಾಟನೆಯನ್ನು ಗದಗ ಉಪವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ನೆರವೇರಿಸುವರು. ಅತಿಥಿಗಳಾಗಿ ಗದಗ ಗ್ರಾಮೀಣ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ ಆಗಮಿಸುವರು. ಶಿಕ್ಷಣಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಾಚಾರ್ಯ ವೈ.ಆರ್. ಹಿರೇಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ. 5ರಂದು ಬ್ಯಾಡ್ಮಿಂಟನ್
ಗಜೇಂದ್ರಗಡ: ತಾಲೂಕು ಮಟ್ಟದ ಪ್ರೌಢಶಾಲಾ ಬಾಲ್ ಬ್ಯಾಡ್ಮಿಂಟನ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ಆಗಸ್ಟ್ 5 ರಂದು ಸ್ಥಳೀಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಆದ್ಯತೆ ನೀಡುವುದರ ಜತೆಗೆ ಕ್ರೀಡಾ ಕ್ಷೇತ್ರಕ್ಕೆ ಪ್ರಧಾನ್ಯ ನೀಡಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಕ್ರೀಡಾ ಮನೋಭಾವನೆ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಹಲವಾರು ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಯತ್ನಿಸುತ್ತಿದೆ. ಅದರಂತೆ ಪ್ರಸಕ್ತ 2013-14ನೇ ಸಾಲಿಗೆ ಈ ಕ್ರೀಡೆಗಳನ್ನು ನಡೆಸಲು ಉದ್ದೇಶಿಸಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತ ಸ್ಪರ್ಧಾಳುಗಳು ಆ. 3 ರೊಳಗಾಗಿ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎ. ಬನ್ನಿಗೋಳ ಅವರಲ್ಲಿ ತಮ್ಮ ಸ್ಪರ್ಧಾಳುಗಳ ಯಾದಿಯನ್ನು ನೀಡಬೇಕೆಂದು ಶಾಲಾ ಮುಖ್ಯೋಪಾಧ್ಯಾಯ ಎಸ್.ಎಫ್. ಜಾಲಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿ ರದ್ದು: ಗ್ರಾಮಸ್ಥರ ಆಕ್ರೋಶ
ನರಗುಂದ: ತಾಲೂಕಿನ ಮೂಗನೂರ ಗ್ರಾಮದಲ್ಲಿ ಒಟ್ಟು 360 ಬಿಪಿಎಲ್ ಕಾರ್ಡ್ಗಳಿದ್ದು, ಇದರಲ್ಲಿ ಕಡು ಬಡವರ 189 ಬಿಪಿಎಲ್ ಕಾರ್ಡ್ಗಳನ್ನು ಯಾವುದೇ ರೀತಿಯ ಸೂಚನೆ ನೀಡದೆ ರದ್ದು ಮಾಡಿರುವ ಕ್ರಮವನ್ನು ವಿರೋಧಿಸಿ ಸೋಮವಾರ ಮೂಗನೂರ ಗ್ರಾಮಸ್ಥರು ಪಟ್ಟಣದ ಆಹಾರ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಗ್ರಾಮವು ತಾಲೂಕಿನಲ್ಲಿ ಚಿಕ್ಕ ಗ್ರಾಮವಾಗಿದ್ದು, ಇಲ್ಲಿ ಹೆಚ್ಚು ಬಡ ಕುಟುಂಬಗಳೇ ವಾಸಿಸುತ್ತಿವೆ. ಇಂತಹ ಗ್ರಾಮದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಉಳ್ಳವರಿಗೆ ಬಿಪಿಎಲ್ ಕಾರ್ಡ್ ನೀಡಿ, ನಿರ್ಗತಿಕರ, ಕಡು ಬಡವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು, ಈ ಕುರಿತು ಪರಿಶೀಲಿಸಿ ರದ್ದುಗೊಳಿಸಿರುವ ಕಾರ್ಡ್ಗಳನ್ನು ಮರಳಿ ನೀಡಬೇಕು. ಇಲ್ಲದೇ ಹೋದಲ್ಲಿ ಆಹಾರ ಇಲಾಖೆಯ ಕಚೇರಿಗೆ ಬೀಗಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮೂಗನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ವರೂ ಸಾಕ್ಷರರಾಗಬೇಕು: ಪಿಡಶೆಟ್ಟಿ
ಗದಗ: ಅನಕ್ಷರತೆ ಎಂಬ ಸಾಮಾಜಿಕ ಪಿಡುಗನ್ನು ಹೊಗಲಾಡಿಸಲು ಸಾಕ್ಷರತೆಯ ಪ್ರಜ್ಞೆ ಎಲ್ಲರಲ್ಲಿ ಮೂಡಿ ಬರಬೇಕು ಎಂದು ಗದಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಪಿಡಶೆಟ್ಟಿ ಹೇಳಿದರು.
ಅವರು ಸೋಮವಾರ ಗದಗ ತಾಪಂ ಆವರಣದಲ್ಲಿ ನಡೆದ ಸಾಕ್ಷರ ಭಾರತ-2013 ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಕ್ಷರ ಭಾರತ ಯೋಜನೆಯಡಿ ಸರ್ಕಾರ ಸರ್ವರನ್ನೂ ಸಾಕ್ಷರರನ್ನಾಗಿಸಲು ದಿಟ್ಟ ಕಾರ್ಯಕ್ರಮವನ್ನು ರೂಪಿಸಿದೆ ಎಂದರು. ರಾಜ್ಯ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ ಸಂಗಮೇಶ ದಿಂಡೂರ ಮಾತನಾಡಿ, ಇಲ್ಲಿ ತರಬೇತಿ ಹೊಂದುವ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಸಾಕ್ಷರ ಭಾರತ-2013 ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಗದಗ ಗ್ರಾಮೀಣ ಬಿ.ಆರ್.ಸಿ ಸಮನ್ವಯ ಅಧಿಕಾರಿ ವಿ.ವಿ. ನಡುವಿನಮನಿ, ಮುಂಡರಗಿ ತಾಲೂಕು ಸಂಯೋಜನಾಧಿಕಾರಿ ಸಿ.ಜಿ. ಧರ್ಮಾಯತ, ಎಸ್.ಪಿ. ಜಾಲವಾಡಗಿ ಸೇರಿದಂತೆ ಗದಗ ತಾಲೂಕಿನ ಸಂಪನ್ಮೂಲ ಶಿಕ್ಷಕರು ಹಾಗೂ ಗ್ರಾಪಂ ವ್ಯಾಪ್ತಿಯ ಪ್ರೇರಕರು ಪಾಲ್ಗೊಂಡಿದ್ದರು. ಸೋಮವಾರದಿಂದ ಆರಂಭಗೊಂಡ ಈ ತರಬೇತಿ ಶಿಬಿರವು ಬುಧವಾರದವರೆಗೆ ನಡೆಯಲಿದೆ. ಶಿಕ್ಷಕಿ ಕೆ.ಎಸ್. ಬೇಲೇರಿ ಪ್ರಾರ್ಥಿಸಿದರು. ಸುನೀತಾ ಕುಲಕರ್ಣಿ ನಿರೂಪಿಸಿದರು. ಶಿಕ್ಷಕ ಎಂ.ಎಫ್. ಕೊಲಕಾರ ವಂದಿಸಿದರು.