ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡಿ: ಆವಾರಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 30
ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ವಿಕಾಸಗೊಳಿಸಿಲು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸ್ಥಳೀಯ ಕನಕದಾಸ ಶಿಕ್ಷಣ ಸಂಸ್ಥೆಯ ಎಂ.ಬಿ. ಆವಾರಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಕನಕದಾಸ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಸಾಂಘಿಕ, ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ, ಶಿಸ್ತು, ಸಮಯ ಪಾಲನೆ ಜತೆಗೆ ಉತ್ತಮ ಗುಣಗಳು ಬೆಳೆಯುತ್ತದೆ. ಅಲ್ಲದೇ ರಾಷ್ಟ್ರೀಯ ಸೇವಾ ಯೋಜನೆಯಂತಹ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ರಾಷ್ಟ್ರದ ಅಭಿವೃದ್ಧಿಗೆ ನಮ್ಮ ಪಾತ್ರವೇನು, ಅದರಲ್ಲಿ ಯಾವ ರೀತಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂಬ ಅರಿವು ಒಡ ಮೂಡಿಸುತ್ತದೆ ಎಂದರು.
ಅತಿಥಿ ಉಪನ್ಯಾಸಕ ಎಂ.ಡಿ. ಸರ್ಕಾವಸ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕ, ಪಾಲಕರ ಜವಾಬ್ದಾರಿಗಿಂತ ಸಮಾಜದ ಹೊಣೆ ಮಹತ್ವದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉತ್ತಮ ಸಾಧನೆಗಳನ್ನು ಮಾಡಿದ ಬಳಿಕ ಸಮಾಜದ ಋಣ ತೀರಿಸುವ ಕಾರ್ಯ ಕೈಗೊಳ್ಳಬೇಕು ಎಂದರು.
ಪ್ರಾಚಾರ್ಯ ಎಚ್.ಎನ್. ಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಲ್.ಕೆ. ಹಿರೇಮಠ, ಉಮೇಶ ಮಲ್ಲಾಪುರ, ಎಂ.ಎಂ. ಕೆಲೂರ, ಸಂತೋಷ ಹಳ್ಳದ, ಜಿ.ಜಿ. ಕುಲಕರ್ಣಿ, ಎ.ಎಂ. ಜಾಲಿಹಾಳ, ಸುಭಾಸ ಅವದೂತ, ಎಸ್.ಕೆ. ಕುಂಬಾರ, ಪವಿತ್ರಾ ಪುರದ ಮುಂತಾದವರು ಇದ್ದರು.
ಎಂ.ಕೆ. ಹಡಪದ ಸ್ವಾಗತಿಸಿದರು. ಬಿ.ಕೆ. ಮಾದಿ ನಿರೂಪಿಸಿದರು. ಬಿ.ಎಸ್. ಶೀಲವಂತರ ವಂದಿಸಿದರು.