ಸಂಶೋಧನೆಗೆ ಹೆಚ್ಚು ಓದಿ: ಡಾ.ರಾಜಲಕ್ಷ್ಮೀ
ಶಿಗ್ಗಾಂವಿ: ಸಂಶೋಧನೆಗೆ ಮುನ್ನ ಹೊಸ ಹೊಸ ವಿಷಯಗಳ ಓದಿನ ಜತೆಗೆ ಸಿದ್ಧಾಂತಗಳ ಪರಿಚಯ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಎನ್.ಕೆ. ರಾಜಲಕ್ಷ್ಮೀ ಅಭಿಪ್ರಾಯಪಟ್ಟರು.
ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ ನಡೆಯುತ್ತಿರುವ ಐದು ದಿನಗಳ ಪಿ.ಎಚ್.ಡಿ. ನಾಲ್ಕನೆಯ ಸಂಶೋಧನಾ ಕಮ್ಮಟದ 4ನೇ ದಿನದ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಯಾವುದೇ ಒಂದು ವಿಷಯ ಅಥವಾ ವಸ್ತು ತನ್ನದೇ ಆದ ಸಂರಚನೆಯನ್ನು ಹೊಂದಿರುತ್ತದೆ. ಈ ಆಧಾರದ ಮೇಲೆಯೇ ಅದಕ್ಕೆ ಅರ್ಥ ಕಲ್ಪಿಸಲಾಗುತ್ತದೆ. ಸಂಶೋಧನೆ ಕೈಗೊಳ್ಳುವ ವಿಷಯಕ್ಕೆ ಸಂಬಂಧಿಸಿ ಹೆಚ್ಚು ಅಧ್ಯಯನ ಮಾಡಬೇಕು. ಮಾಹಿತಿ ವರ್ಗೀಕರಣದ ಸಂದರ್ಭದಲ್ಲಿ ಸಿದ್ಧಾಂತಗಳು ಉಪಯೋಗಕ್ಕೆ ಬರುತ್ತವೆ. ಸತ್ಯ ಸಾರ್ವತ್ರಿಕವಾದುದಲ್ಲ. ಅದಕ್ಕೆ ಹಲವು ಮುಖಗಳಿವೆ. ಅವುಗಳನ್ನು ಕಂಡುಕೊಳ್ಳುವ ಪ್ರಯತ್ನವೇ ಯಶಸ್ವಿ ಸಂಶೋಧನಾ ಪ್ರಕ್ರಿಯೆ ಎಂದು ಪ್ರತಿಪಾದಿಸಿದರು.
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಎಂಬಿಎ ವಿಭಾಗದ ಪ್ರಾಧ್ಯಾಪಕ ಪ್ರೊ ಉದಯಕುಮಾರ್ ಇರ್ವತ್ತೂರು ಮಾತನಾಡಿ, ವಸಹಾತೀಕರಣ ಭಾರತೀಯ ಜನಜೀವನದ ಮೇಲೆ ಪ್ರಭಾವ ಬೀರಿದೆ. ಜಾಗತೀಕರಣ ನಮ್ಮ ಬದುಕಿನ ಎಲ್ಲ ಚಟುವಟಿಕೆ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಸಮಾಜದ ಹಿತಕ್ಕೆ ಸಂಪನ್ಮೂಲಗಳ ಸದ್ವಿನಿಯೋಗವಾಗಬೇಕು. ಆಗಲೇ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಾನಪದ ವಿವಿ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ, ಕುಲಸಚಿವ ಡಾ ಸಿ.ಎ. ಸೋಮಶೇಖರಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ ಸ.ಚಿ. ರಮೇಶ, ಹಿರಿಯ ಸಂಶೋಧನಾ ಅಧಿಕಾರಿ ಡಾ ಕೆ. ಪ್ರೇಮಕುಮಾರ, ವಿಶ್ವವಿದ್ಯಾಲಯದ ಗ್ರಾಮೀಣ ಮತ್ತು ಬುಡಕಟ್ಟು ವ್ಯವಹಾರ ನಿರ್ವಹಣೆ (ಎಂಬಿಎ) ವಿಭಾಗದ ಮುಖ್ಯಸ್ಥ ಪ್ರೊ ಎಂ. ಚಂದ್ರ ಪೂಜಾರಿ ಉಪಸ್ಥಿತರಿದ್ದರು. ಸಂಗಮೇಶ ಎಸ್. ಗಣಿ ನಿರೂಪಿಸಿದರು.