ಇಂದು ಹಾಲು ವಿತರಣೆ
ಗದಗ: ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಹಾಲು ಒಕ್ಕೂಟ ಧಾರವಾಡ ಇವರ ಆಶ್ರಯದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಹಾಲು ವಿತರಣೆ ಕಾರ್ಯಕ್ರಮವನ್ನು ಆಗಸ್ಟ್ 1ರ ಬೆಳಗ್ಗೆ 10 ಗಂಟೆಗೆ ಸ್ಥಳೀಯ ಎಸ್.ಎಂ. ಕೃಷ್ಣ ನಗರದ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ ನಂ. 12ರಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಪಂ ಸಿಇಓ ವೀರಣ್ಣ ತುರಮರಿ ವಹಿಸುವರು. ಅತಿಥಿಗಳಾಗಿ ಎಸ್ಪಿ ಡಾ. ಎಸ್.ಡಿ. ಶರಣಪ್ಪ ಆಗಮಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ ನಾಯಕ ಸ್ವಾಗತ ಕೋರಿದ್ದಾರೆ.
ಕೋರ್ಸ್ಗಳಿಗೆ ಪ್ರವೇಶ
ಗದಗ: ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2013-14ನೇ ಸಾಲಿಗೆ ಬಿಎ, ಬಿಕಾಂ, ಬಿಎಸ್ಸಿ ಹಾಗೂ ಬಿಬಿಎ ಪ್ರಥಮ ವರ್ಷಕ್ಕೆ ಪ್ರವೇಶಾತಿ ಹೊಂದಲು ಅವಕಾಶವಿರುತ್ತದೆ. ಪಿಯುಸಿ ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪ್ರವೇಶಾತಿಗಳು ಪ್ರಾರಂಭವಾಗಿದ್ದು, ಆಗಸ್ಟ್ 10 ರವರೆಗೆ ಪ್ರವೇಶಾತಿಯನ್ನು ಹೊಂದಲು ಸಮಯಾವಕಾಶವಿರುತ್ತದೆ. ಪ್ರವೇಶ ಪಡೆಯುವ ಅರ್ಹ ವಿದ್ಯಾರ್ಥಿಗಳು ಪ್ರವೇಶ ಅರ್ಜಿಗಳನ್ನು ಕಾಲೇಜಿನ ಕಾರ್ಯಾಲಯದಲ್ಲಿ ಪಡೆದುಕೊಂಡು ಆಗಸ್ಟ್ 10 ರೊಳಗೆ ಪ್ರವೇಶ ಪಡೆಯುವಂತೆ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ (9449900057) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕುಟೀರ ಉದ್ಘಾಟನೆ
ಗಜೇಂದ್ರಗಡ: ಸ್ಥಳೀಯ ಜ. ತೋಂಟದಾರ್ಯ ಪ್ರೌಢ ಶಾಲೆಯಲ್ಲಿ ಲಿಂಗಪೂಜಾ ಮಂದಿರ ಅಲ್ಲಮನ ಕುಟೀರದ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 1 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ವಹಿಸುವರು. ಚಿಂಚಣಿ ಸಂಸ್ಥಾನ ಮಠದ ಅಲ್ಲಮಪ್ರಭು ಶ್ರೀಗಳು, ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು, ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಸ್ಥಳೀಯ ಸಂಸ್ಥೆ ಚೇರಮನ್ ಎಸ್.ಎಲ್. ಹಿರೇಮನಿ ಮುಂತಾದವರು ಪಾಲ್ಗೊಳ್ಳುವರು ಎಂದು ಕಾರ್ಯದರ್ಶಿ ಅಶೋಕ ಹೊನವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗಡಿ ಆಯ್ಕೆ
ಲಕ್ಷ್ಮೇಶ್ವರ: ಸಮೀಪದ ಮಂಜಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಎಸ್.ವಿ. ಅಂಗಡಿ ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ 2013ನೇ ಸಾಲಿನ ಶಿರಹಟ್ಟಿ ತಾಲೂಕು ಘಟಕದ ಚುನಾವಣೆಯಲ್ಲಿ ಸಂಘದ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಶಾಲೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.