ಉ-ಕ ಪ್ರತ್ಯೇಕ ರಾಜ್ಯವಾದರೆ ಮಾತ್ರ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ಗದಗ, ಜು. 31
ಸ್ವಾತಂತ್ರ್ಯಾ ನಂತರ ಉತ್ತರ ಕರ್ನಾಟಕದಲ್ಲಿ ಅಂದುಕೊಂಡಷ್ಟು ಅಭಿವೃದ್ಧಿಯಾಗಿಲ್ಲ. ಪ್ರತ್ಯೇಕ ರಾಜ್ಯವಾಗದ ಹೊರತು ಉತ್ತರ ಕರ್ನಾಟಕ ಅಭಿವೃದ್ಧಿ ಅಸಾಧ್ಯ ಎಂದು ಜಿಲ್ಲಾ ಜಾಗೃತ ವೇದಿಕೆ ಅಧ್ಯಕ್ಷ ವಿ.ಆರ್. ಮಾಳೆಕೊಪ್ಪಮಠ ಹೇಳಿದರು.
ನಗರದ ಜಾಗೃತ ವೇದಿಕೆ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದಕ್ಷಿಣ ಕರ್ನಾಟಕದಲ್ಲಿನ ಉದ್ದಿಮೆಗಳು ಅಭಿವೃದ್ಧಿಗೆ ಪೂರಕವಾದವು. ಉತ್ತರ ಕರ್ನಾಟಕದ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಉದ್ದಿಮೆಗಳು ಸ್ಥಾಪನೆಯಾಗಿಲ್ಲ. ಈಗಲಾದರೂ ಜನತೆ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹೋರಾಡುವುದು ಅತ್ಯವಶ್ಯ. ಗದಗ-ವಾಡಿ ರೈಲು ಮಾರ್ಗ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದ್ದು, ಈ ಕುರಿತು ಹಲವು ಬಾರಿ ಹೋರಾಟ ನಡೆಸಿದರೂ ಇಲ್ಲಿವರೆಗೆ ಕೇಂದ್ರ ಸರ್ಕಾರ ಮಾರ್ಗ ಕಲ್ಪಿಸಲು ಮುಂದಾಗದೇ ಇರುವುದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ರಾಜ್ಯದವರೇ ರೇಲ್ವೆ ಸಚಿವರಾಗಿದ್ದು, ಗದಗ-ವಾಡಿ ಮಾರ್ಗಕ್ಕೆ ಅಗತ್ಯ ನೆರವು ನೀಡಬೇಕು. ಈ ಕುರಿತು ಈ ಭಾಗದ ಶಾಸಕರು, ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು ಅತ್ಯವಶ್ಯ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಹುತೇಕ ಕಡೆಗಳಲ್ಲಿ ಶೌಚಾಲಯಗಳಿಲ್ಲ. ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ನಗರದ ಕುಮಾರವ್ಯಾಸ ಮಳಿಗೆಯ ಎದುರು ಜಿಲ್ಲಾಸ್ಪತ್ರೆ ಕಂಪೌಂಡ್‌ಗೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಾರೆ. ಅಲ್ಲದೇ ಕಸ ಹಾಕುವುದು ವಿಪರೀತವಾಗಿದೆ. ಜಿಲ್ಲಾಸ್ಪತ್ರೆ ಕಾಂಪೌಂಡ್ ಒಳಗೆ ಸುಲಭ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಸ್ಥಳ ಹಾಗೂ ನೀರಿನ ವ್ಯವಸ್ಥೆಯಿದ್ದು, ಅಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ಗದಗ-ಬೆಟಗೇರಿ ಅವಳಿ ನಗರದ ಹಲವು ರಸ್ತೆಗಳು ದುರಸ್ತಿಯಾಗದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರಸಭೆ ವತಿಯಿಂದ ರಸ್ತೆಗಳ ಅಭಿವೃದ್ಧಿ ಅಸಾಧ್ಯವಾಗಿದ್ದು, ಕಾರಣ ಪಿಡಬ್ಲ್ಯೂಡಿಗೆ ನಗರದ ರಸ್ತೆಗಳ ದುರಸ್ತಿ ಕೆಲಸ ವಹಿಸಿಕೊಡಬೇಕು. ಈಗಾಗಲೇ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಬವಣೆ ತಪ್ಪಿಲ್ಲ. ಸುಮಾರು 20-25 ದಿನಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಪೂರೈಕೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸಬೇಕು. ನಲ್ಲಿಗಳಿಗೆ ಮೀಟರ್ ಅಳವಡಿಸಿವ ಮೂಲಕ ನೀರು ಪೋಲಾಗುವುದನ್ನು ತಪ್ಪಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಎ.ಎಂ. ಗೌಡರ, ಈ.ಬಿ. ಕಾಳೆ, ಎಸ್.ಬಿ. ಬೊಮ್ಮಸಾಗರ, ಈ.ಜಿ. ಚೊಳೀನ, ಬಿ.ಬಿ. ಗಿಡ್ನಂದಿ, ವಿ.ಎಸ್. ಹಿರೇಮಠ, ಎಲ್.ಪಿ. ಕಂಬಿ ಮುಂತಾದವರು ಪಾಲ್ಗೊಂಡಿದ್ದರು.