ಗಬ್ಬೆದ್ದು ನಾರುತ್ತಿದೆ ಮುಂಡರಗಿ..!
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 31
ಪಟ್ಟಣದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಪ್ರತಿಯೊಂದು ಕಾಲನಿಗಳು, ಬಡಾವಣೆಗಳೂ ಸ್ವಚ್ಛತೆ ಇಲ್ಲದೇ ರೋಗ ಉತ್ಪತ್ತಿ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ.
ಇದಕ್ಕೆಲ್ಲ ಕೊನೆಯೇ ಇಲ್ಲವೇ ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ? ನಮ್ಮ ಸಮಸ್ಯೆಗೆ ನಿಜವಾಗಿಯೂ ಸ್ಪಂದಿಸುವವರ್ಯಾರು ಎನ್ನುವ ಪ್ರಶ್ನೆ ಪಟ್ಟಣದ ಜನತೆಯನ್ನು ಕಾಡುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಸೋಮವಾರ ಪಟ್ಟಣದ ಬಾಲಕನೋರ್ವ ಡೆಂಘೀ ಜ್ವರಕ್ಕೆ ಬಲಿಯಾಗಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಅನ್ನದಾನೀಶ್ವರ ನಗರ, ಕೊಪ್ಪಳ ಕ್ರಾಸ್, ಗದಗ-ಮುಂಡರಗಿ ರಸ್ತೆ, ಅಲಂಕಾರ ಲಾಡ್ಜ್ ಮುಂದೆ, ಎಸ್‌ಬಿಐ ಬ್ಯಾಂಕ್ ಎದುರು, ಜೆ.ಎಚ್. ಪಟೇಲ್ ನಗರ, ಪೊಲೀಸ್ ಠಾಣೆ ಪಕ್ಕದಲ್ಲಿ ಹೀಗೆ ಬಹುತೇಕ ಭಾಗಗಳಲ್ಲಿನ ಗಟಾರ್‌ಗಳು ತುಂಬಿ ಗಬ್ಬು ನಾರುತ್ತಿವೆ. ದುರ್ನಾತ ತಡೆಯಲಾಗದೇ ಇಲ್ಲಿನ ನಿವಾಸಿಗಳು ನಿತ್ಯ ಮನೆಯ ಬಾಗಿಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. 22ನೇ ವಾರ್ಡ್‌ನ ಜೆ.ಎಚ್. ಪಟೇಲ್ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಎದುರಿನ ಗಟಾರ್‌ದಲ್ಲಿ ಉಸುಕು ಹಾಗೂ ಇತರೆ ವಸ್ತುಗಳು ಬಿದ್ದು, ನೀರು ಹರಿದು ಹೋಗದೆ ಅಲ್ಲಿಯೇ ನಿಂತಿದೆ. ಇದರಿಂದ ಹಾಸ್ಟೆಲ್‌ನಲ್ಲಿನ ನೂರಾರು ವಿದ್ಯಾರ್ಥಿನಿಯರು ನಿತ್ಯ ಪರದಾಡುವಂತಾಗಿದೆ. ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಗಟಾರ ಸುತ್ತಮುತ್ತ ಸಾಕಷ್ಟು ಕಸ ಬೆಳೆದಿದ್ದು, ಕೊಳಕು ತುಂಬಿದೆ. ಬಸ್ ನಿಲ್ದಾಣದ ಹತ್ತಿರ ಸುಮಾರು 5 ಅಡಿ ಎತ್ತರದ ದೊಡ್ಡ ಚರಂಡಿಯಿದ್ದು, ನೀರು ಹರಿದು ಹೋಗದೆ ಹಾಗೇ ನಿಂತಿದೆ. ಪಕ್ಕದಲ್ಲಿಯೇ ಸುಮಾರು 7-8 ಎಗ್ಗ್ ರೈಸ್ ಮಾರಾಟ ಮಾಡುವ ಗಾಡಿಗಳು ನಿಲ್ಲುತ್ತವೆ. ಈ ಅಸ್ವಚ್ಛತೆಯ ಮಧ್ಯೆಯೇ ಸಾರ್ವಜನಿಕರು ಅದರ ಪಕ್ಕದಲ್ಲಿಯೇ ನಿಂತು ಅದನ್ನು ಸೇವಿಸುತ್ತಾರೆ.
ಆಸ್ಪತ್ರೆಯ ಆವರಣ ಅಸ್ವಚ್ಛತೆ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಒಂದೆಡೆಯಾದರೆ ಆಸ್ಪತ್ರೆ ಆವರಣದಲ್ಲಿ ಅಸ್ವಚ್ಛತೆ ಮೀತಿ ಮೀರಿದೆ. ಆವರಣದ ಪಕ್ಕದಲ್ಲಿ ಸಾಕಷ್ಟು ಗಲೀಜು ಹಾಗೂ ಒಳಗಡೆ ಹಂದಿಗಳು ನುಗ್ಗಿ ಎಲ್ಲೆಂದರಲ್ಲಿ ಹೊಲಸು ಮಾಡುತ್ತಿವೆ. ರೋಗಿಗಳು ಸೇವಿಸಿದ ಎಳೆ ನೀರು ಕಾಯಿಗಳನ್ನು ಆವರಣದಲ್ಲಿ ಬೀಸಾಡಲಾಗಿದೆ. ಅಲ್ಲಲ್ಲಿ ಪ್ಲಾಸ್ಟಿಕ್ ಸೇರಿದಂತೆ ಅನೇಕ ಕಸ ಕಡ್ಡಿಗಳು ತುಂಬಿದ್ದು, ಇಲ್ಲಿ ಮಳೆ ನೀರು ಸಂಗ್ರಹವಾಗಿ ಡೆಂಘೀಯಂತಹ ಕಾಯಿಲೆಗಳು ಆಸ್ಪತ್ರೆಯಿಂದಲೇ ಹರಡುವಂತಹ ವಾತಾವರಣ ನಿರ್ಮಾಣವಾಗಿದ್ದರೂ ಯಾರೂ ಇದರ ಬಗ್ಗೆ ಗಮನ ನೀಡುತ್ತಿಲ್ಲ.
- ಶರಣು ಸೊಲಗಿ