ನದಿ ಪಾತ್ರದ ಜನರಿಗೆ ಸೂಚನೆ
ಗದಗ: ಜಿಲ್ಲೆಯ ತುಂಗಭದ್ರಾ ನದಿ ಪಾತ್ರದ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಗ್ರಾಮಗಳಾದ ಇಟಗಿ, ಸಾಸಲವಾಡ, ತೊಳಲಿ, ಕಲ್ಲಾಗನೂರ, ಕೊರ್ಲಹಳ್ಳಿ, ಶಿಂಗಟಾಲೂರ, ಹಮ್ಮಿಗಿ, ಕಕ್ಕೂರ, ಹೆಸರೂರ, ಬಿದ್ರಳ್ಳಿ, ವಿಠಲಾಪುರ, ಗುಮ್ಮಗೋಳ, ಶೀರನಹಳ್ಳಿ, ನಾಗರಳ್ಳಿ ಒಳಗೊಂಡಂತೆ ಈ ಭಾಗದ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕ್ರಮೇಣ ಹೆಚ್ಚಳವಾಗುತ್ತಿದೆ. ಹರಿದು ಬರುವ ಒಳಹರಿವಿನ ಪ್ರಮಾಣ ಈ ದಿನದಂದು 32010 ಕ್ಯುಸೆಕ್ ಇದ್ದು, ಇದೇ ರೀತಿ ಮುಂದುವರೆದಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ ಅತಿ ಹೆಚ್ಚಾಗುವ ನಿರೀಕ್ಷೆ ಇದೆ. ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡಲಾಗುವುದು. ಜತೆಗೆ ತುಂಗಭದ್ರಾನದಿ ಪಾತ್ರದಲ್ಲಿ ಮಳೆಯೂ ಆಗುತ್ತಿದ್ದು, ದಂಡೆಯುದ್ದಕ್ಕೂ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ಹಾಗೂ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಲು ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಣ್ಣೆಪ್ಪ ಕಲ್ಯಾಣಿ ನಿಧನ
ಶಿರಹಟ್ಟಿ: ಪಟ್ಟಣದ ಮ್ಯಾಗೇರಿ ಓಣಿಯ ನಿವಾಸಿ ಬಸವಣ್ಣೆಪ್ಪ ಮಲ್ಲಪ್ಪಾ ಕಲ್ಯಾಣಿ (80) ಬುಧವಾರ ಸಂಜೆ ನಿಧನರಾದರು. ಮೃತರಿಗೆ 6 ಪುತ್ರಿಯರು, ಓರ್ವ ಪುತ್ರ, ಬಂಧು ಬಳಗ ಇದ್ದರು. ಜ. ಫಕ್ಕೀರ ಸಿದ್ಧರಾಮ ಶ್ರೀ, ಶಾಸಕ ರಾಮಕೃಷ್ಣ ದೊಡ್ಡಮನಿ, ಡಾ. ಟಿ.ಎಂ. ಮಹೇಂದ್ರಕರ, ಕರಡೆಪ್ಪ ವರವಿ, ಹಾಲಪ್ಪ ಭಕ್ಕಸದ, ಪ್ರಕಾಶ ಮಾಬಳ್ಳಿ, ಯಲ್ಲಪ್ಪ ಇಂಗಳಗಿ ಸಂತಾಪ ಸೂಚಿಸಿದ್ದಾರೆ.
ಈಶಪ್ಪ ಪತ್ತಾರ ನಿಧನ
ಗಜೇಂದ್ರಗಡ: ಸ್ಥಳೀಯ ಹಿರೇಬಜಾರ ನಿವಾಸಿ ಈಶಪ್ಪ ಪತ್ತಾರ (70) ಸೋಮವಾರ ನಿಧನರಾದರು. ಮೃತರು ಪತ್ನಿ ಪುತ್ರ, ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.