ಬಡವರಿಗೆ ಅವಕಾಶ ನೀಡಲು ಮನವಿ
ಮುಂಡರಗಿ: ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿನ 2ನೇ ಪ್ಲಾಟುಗಳ ಹತ್ತಿರ ಹೊಸದಾಗಿ ಅಂಗನವಾಡಿ ಕೇಂದ್ರ ಮಂಜೂರು ಮಾಡಿದ್ದು, ಈ ಅಂಗನವಾಡಿಗೆ ಈಗಾಗಲೇ ಬೇರೆ ಅಂಗನವಾಡಿಯಲ್ಲಿ ಸೇವೆ ಸಲ್ಲಿಸುವ ಅಂಗನವಾಡಿ ಕಾರ್ಯಕರ್ತೆಯರನ್ನು ವರ್ಗಾವಣೆ ಮಾಡುವ ಬದಲು ಗ್ರಾಮದಲ್ಲಿರುವ ಬಡವರಿಗೆ ಹೊಸದಾಗಿ ನೇಮಕ ಮಾಡಿಕೊಳ್ಳಬೇಕೆಂದು ಗ್ರಾಮದ ಕೆಲವು ಮುಖಂಡರು ಒತ್ತಾಯಿಸಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈಗಾಗಲೇ ಈ ಅಂಗನವಾಡಿ ಕೇಂದ್ರಕ್ಕೆ ಬೇರೆಡೆ ಇರುವ ಶಿಕ್ಷಕಿಯನ್ನು ನಿಯೋಜನೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಹೊಸದಾಗಿ ಅರ್ಜಿಯನ್ನು ಕರೆದು ನೂತನವಾಗಿ ಬಿದರಳ್ಳಿ ಗ್ರಾಮದವರೇ ಆಗಿರುವ ದಲಿತರಿಗೆ, ಹಿಂದುಳಿದವರಿಗೆ, ವಿಧವೆಯರಿಗೆ, ಬಡವರಿಗೆ ಅವಕಾಶ ಮಾಡಿಕೊಡಬೇಕು. ಒಂದು ವೇಳೆ ನಮ್ಮ ಮನವಿಯನ್ನು ಪರಿಗಣಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಬಿದರಳ್ಳಿ ಗ್ರಾಪಂನ ಮಾಜಿ ಅಧ್ಯಕ್ಷ ನೀಲಪ್ಪ ನಂದಗಾವಿ, ಮುತ್ತಣ್ಣ ಹೊಸಮಠ, ಮಹೇಶ ಕಳಸಾಪೂರ, ದೇವಪ್ಪ ಕಾಯಿಶೆಟ್ಟಿ, ಶರಣಪ್ಪ ಬನ್ನಿಮಟ್ಟಿ ಇದ್ದರು.