ಬಿಸಿಯೂಟ: ಖಾಸಗೀಕರಣಕ್ಕೆ ಖಂಡನೆ
ನರಗುಂದ: ಹಲವು ವರ್ಷಗಳಿಂದ ಅಲ್ಪ ವೇತನದಲ್ಲಿ ಬಿಸಿಯೂಟ ಯೋಜನೆಯಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸುವ ನೌಕರರನ್ನು ಕಡೆಗಣಿಸಿ, ಸರ್ಕಾರ ಈ ಯೋಜನೆ ಖಾಸಗೀಕರಣ ಮಾಡಲು ಹೊರಟ್ಟಿದ್ದು ಖಂಡನೀಯವೆಂದು ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಸ್. ಹಡಪದ ಹೇಳಿದರು.
ಈಚೆಗೆ ಅವರು ಪಟ್ಟಣದ ಸಿಐಟಿಯು ಜಿಲ್ಲಾ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಬಿಸಿಯೂಟ ನೌಕರರ ತಾಲೂಕು ಮಟ್ಟದ 3ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಬಿಸಿಯೂಟ ಯೋಜನೆಯಲ್ಲಿ ಅಲ್ಪ ವೇತನದಲ್ಲಿ ಬಿಸಿಯೂಟ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಸರ್ಕಾರ ಈ ಯೋಜನೆಯನ್ನು ಖಾಸಗೀರಣ ಮಾಡಲು ಹೋದರೆ ಈ ಯೋಜನೆಯಲ್ಲಿ ರಾಜ್ಯದ ಪ್ರತಿ ಹಳ್ಳಿಯ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಬೀದಿಗೆ ತಳ್ಳಿದಂತಾಗುತ್ತದೆ. ನಾವು ಈ ಹಿಂದೆ ಬಿಸಿಯೂಟ ಯೋಜನೆಯಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಂಬಳ, ಜೀವ ವಿಮೆ ಸೇರಿದಂತೆ ಹಲವಾರು ಬೇಡಿಕೆಗಳ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದರೂ ಆ ಸರ್ಕಾರ ಈ ನೌಕರರಿಗೆ ಏನೂ ಮಾಡಲಿಲ್ಲ. ಸದ್ಯ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಖಾಸಗೀಕರಣ ಮಾಡಿ ಇವರನ್ನು ಬೀದಿ ಪಾಲ ಮಾಡಿದರೆ ರಾಜ್ಯಾದ್ಯಂತ ಬೃಹತ್ ಪ್ರತಭಟನೆ ಮಾಡಲಾಗುವುದು ಎಂದರು.
ಜಿಲ್ಲಾ ಸಿಐಟಿಯು ಮುಖಂಡ ಮಹೇಶ ಹಿರೇಮಠ ಮಾತನಾಡಿ, ಸರ್ಕಾರ ಬಿಸಿಯೂಟ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸರಿಯಾಗಿ ಸ್ಪಂದಿಸಬೇಕು.
ಆಗಸ್ಟ್ 18 ರಂದು ಗದಗದಲ್ಲಿ ಜಿಲ್ಲಾ ಬಿಸಿಯೂಟ ಯೋಜನೆಯಲ್ಲಿ ಸೇವೆ ಸಲ್ಲಿಸುವ ನೌಕರರ ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಲಾಗುವುದು ಎಂದರು. ತಾಲೂಕು ಅಧ್ಯಕ್ಷ, ಗೌಸ್ ಫೀರನವರ, ತಾಲೂಕು ಬಿಸಿಯೂಟ ನೌಕರರು ಉಪಸ್ಥಿತರಿದ್ದರು.