ಶಾಲೆಗೆ ಬೀಗ ಜಡಿದು ಪ್ರತಿಭಟನೆ
ರೋಣ: ಶಿಕ್ಷಕರ ನಿರಂತರ ಅನಧಿಕೃತ ಗೈರು ಮತ್ತು ಶಿಕ್ಷಕರ ಕೊರತೆ, ಶಾಲಾ ಅವ್ಯವಸ್ಥೆ ಖಂಡಿಸಿ, ತಾಲೂಕಿನ ಕರಮುಡಿ ಗ್ರಾಮಸ್ಥರು ಬುಧವಾರ ಸ್ಥಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದರು.
ಶಾಲೆಯಲ್ಲಿ 1ರಿಂದ 7 ರವರೆಗೆ ವರ್ಗಗಳಿದ್ದು ಕೇವಲ ನಾಲ್ಕು ಶಿಕ್ಷಕರಿದ್ದಾರೆ. ಅದರಲ್ಲಿ ನಿರಂತರವಾಗಿ ಇಬ್ಬರು ಶಿಕ್ಷಕರು ಗೈರಿರುತ್ತಾರೆ. ಇದರಿಂದ ಮಕ್ಕಳಿಗೆ ಸಮರ್ಪಕ ಶಿಕ್ಷಣ ದೊರಕುತ್ತಿಲ್ಲ. ಶಾಲಾ ಅಭಿವೃದ್ದಿ ಮತ್ತು ಉಸ್ತುವಾರಿ ಸಮಿತಿ ಅವಧಿ ಮುಗಿದು ವರ್ಷಗಳೇ ಕಳೆದರೂ ಮರು ಸಮಿತಿ ರಚಿಸಿಲ್ಲ. ಶಾಲೆಯು ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿ, ಸ್ಥಳಕ್ಕೆ ಬಿಇಒ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಸುದ್ದಿ ತಿಳಿದು ಪ್ರತಿಭಟನಾ ನಿರತ ಸ್ಥಳಕ್ಕಾಗಮಿಸಿದ ರೋಣ ತಾಲೂಕು ಬಿಇಓ ಕೆ.ವಿ. ಪಾಟೀಲ ಗ್ರಾಮಸ್ಥರನ್ನು ಸಮಾಧಾನ ಪಡಿಸಿ, ಇನ್ನು ಮುಂದೆ ಶಾಲೆಗೆ ಶಿಕ್ಷಕರ ಕೊರತೆಯಾಗದಂತೆ ಹೆಚ್ಚುವರಿಯಾಗಿ ಶಿಕ್ಷಕರನ್ನು ನೇಮಿಸಲಾಗುವದು. ಅನಧಿಕೃತ ಗೈರು ಶಿಕ್ಷಕರ ಮೇಲೆ ಕ್ರಮ ಜರುಗಿಸಲಾಗುವುದು. ಸದ್ಯದಲ್ಲಿಯೇ ಶಾಲಾ ಸುಧಾರಣೆ ಸಮಿತಿ ರಚಿಸಲು ಗ್ರಾಪಂಗೆ ಸಭೆ ಕರೆಯಲು ವಿನಂತಿಸಲಾಗುವುದು ಎಂದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.