ಉಪ ತಹಸೀಲ್ದಾರ್ ಲೋಕಾ ಬಲೆಗೆ
ಮುಂಡಗೋಡ: ಲಂಚ ಸ್ವೀಕರಿಸುತ್ತಿದ್ದ ಪಾಳಾ ಹೋಬಳಿ ಉಪ ತಹಸೀಲ್ದಾರ್ ಬಾಲಚಂದ್ರ ದಾಸರ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶನಿವಾರ ನಡೆದಿದೆ. ಬಸವರಾಜ ಮಂಟಗುಣಿ ಎಂಬುವವರು ತಮ್ಮ ತಾಯಿಯ ಹೆಸರಲ್ಲಿರುವ ಕೊಳಗಿ ಸರ್ವೆ ನಂ 23/2ರಲ್ಲಿರುವ 4 ಎಕರೆ 11 ಗುಂಟೆ ಭೂಮಿಯ ಮೇಲೆ ತಕರಾರು ಅರ್ಜಿ ಸಲ್ಲಿಸಿದ್ದರು. ತಮ್ಮ ಪರ ಪಹಣಿ ಪತ್ರ ಬರುವಂತೆ ಮಾಡಿಕೊಡುವುದಾಗಿ ಹೇಳಿದ ಬಾಲಚಂದ್ರ, ರು. 45 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಫಲಾನುಭವಿ ಬಸವರಾಜ ಲೋಕಾಯುಕ್ತರಿಂದ ದೂರು ನೀಡಿದ್ದರು. ಹೀಗಾಗಿ ಶನಿವಾರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ ಹಣ ಸಮೇತ ಉಪ ತಹಸೀಲ್ದಾರ್ ದಾಸರ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ