ಮಳೆ: ಸೇತುವೆ ಕಿತ್ತು ಅಪಾರ ಹಾನಿ
ರೋಣ: ಶುಕ್ರವಾರ ರಾತ್ರಿ ರೋಹಿಣಿ ಮಳೆ ರಭಸದಿಂದ ಸುರಿದ ಪರಿಣಾಮವಾಗಿ ತಾಲೂಕಿನ ಇಟಗಿ ಸಮೀಪದ ಗದ್ದಿ ಹಳ್ಳದ ಮತ್ತು ಹಿರೇಅಳಗುಂಡಿ ಚಿಕ್ಕ ಹಳ್ಳಕ್ಕೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಕಿತ್ತುಹೋಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ತಾಲೂಕಿನ ಇಟಗಿ ಗ್ರಾಮದ ಮೂಲಕ ಮುಶಿಗೇರಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗೆ ಅಡ್ಡಲಾಗಿರುವ ಗದ್ದಿ ಹಳ್ಳದ ಮತ್ತು ಚಿಕ್ಕ ಹಳ್ಳಕ್ಕೆ ಮಳೆಯಾದರೂ ಸಾಕು ತುಂಬಿ ಹರಿಯುತ್ತದೆ. ಇದರಿಂದ ಚಿಕ್ಕ ಅಳಗುಂಡಿ, ಹಿರೇಅಳಗುಂಡಿ, ಮುಶಿಗೇರಿ ಮತ್ತು ಇಟಗಿ ಗ್ರಾಮದ ಪ್ರಾಯಾಣಿಕರಿಗೆ, ಶಾಲಾ ಮಕ್ಕಳಿಗೆ ಮತ್ತು ರೈತರಿಗೆ ಪದೇಪದೇ ತೀವ್ರ ತೊಂದರೆಯಾಗುತ್ತಿತ್ತು. ಆದ್ದರಿಂದ ಶಾಶ್ವತವಾಗಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದರಿಂದ ಸೇತುವೆ ನಿರ್ಮಾಣ ಕಾಮಗಾರಿಯನ್ನು ಹೈದ್ರಾಬಾದ್ ಮೂಲದ ಎನ್‌ಆರ್‌ಸಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.
ಮಳೆಗಾಲವಿದ್ದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆಯಾಗಬಾರದೆಂದು ತಾತ್ಕಾಲಿಕ ಸೇತುವೆ ನಿರ್ಮಿಸಿ ಕಾಮಗಾರಿ ಪ್ರಾರಂಭಿಸಲಾಗಿತ್ತು, ಆದರೆ, ಶನಿವಾರ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ನೀರು ರಭಸವಾಗಿ ಹರಿದ ಪರಿಣಾಮ ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಸುಮಾರು 18(2 ಹಳ್ಳಸೇರಿ) ಸಿಮೆಂಟ್ ಪೈಪುಗಳು ಕೊಚ್ಚಿಹೋಗಿವೆ. ಸದ್ಯ ಹಳ್ಳಕ್ಕೆ ರೈತರ ಜಮೀನಿನಿಂದ ನೀರು ಬರುತ್ತಿರುವುದಿಂದ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಕಿತ್ತಿರುವ ಸಿಮೆಂಟ್ ಪೈಪ್‌ಗಳು ಎಲ್ಲೆಂದರಲ್ಲಿ ಬಿದ್ದಿವೆ. ಕೆಲವು ಉಸುಕಿನಲ್ಲಿ ಮುಚ್ಚಿ ಹೋಗಿವೆ ಎಂದು ಬಸಪ್ಪ ಮಣಿನಾಗರ ತಿಳಿಸಿದರು.