ಮೂಲಸೌಲಭ್ಯ ಮರೀಚಿಕೆ
ಕನ್ನಡಪ್ರಭ ವಾರ್ತೆ, ರೋಣ, ಜೂ. 1
ಇಲ್ಲಿ ಕಾಲಿಟ್ಟಲೆಲ್ಲಾ ಕೊಚ್ಚೆಯ ದರ್ಶನ, ಗಬ್ಬು ವಾಸನೆ. ಇಡೀ ಕಾಲೋನಿಯೇ ಅನಾರೋಗ್ಯವನ್ನು ಹೊದ್ದು ಮಲಗಿದಂತಿದೆ. ಮೂಲ ಸೌಲಭ್ಯ ಎನ್ನುವದು ಇಲ್ಲಿ ಮರೀಚಿಕೆಯಾಗಿದೆ. ಪಟ್ಟಣದ ಹೊರವಲಯದಲ್ಲಿರುವ ಉಗ್ರಾಣ ನಿಗಮದ ಹತ್ತಿರದಲ್ಲಿರುವ 11ನೇ ವಾರ್ಡಿನ ಕಾಲೋನಿಯ ಚಿತ್ರಣವಿದು.
ಕಾಲೋನಿಯಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿದ್ದು, 25 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಎಲ್ಲ ಮನೆಗಳ ಛಾವಣಿಗೆ ಸಿಮೆಂಟ್ ತಗಡುಗಳನ್ನು ಹಾಕಲಾಗಿದೆ. ಸುಮಾರು 800 ಜನಸಂಖ್ಯೆಯಿದ್ದು, ಬಹುತೇಕರು ಕೂಲಿ ಕಾರ್ಮಿಕರೇ.
ಚರಂಡಿ ನಿರ್ಮಾಣವಾಗಿಲ್ಲ: ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಎಲ್ಲೆಡೆ ಕೊಳಚೆ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳು ಹೆಚ್ಚಾಗಿ ಕಾಲೋನಿ ನಿವಾಸಿಗಳು ಆಗಾಗ್ಗೆ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ, ಚರಂಡಿ, ಕುಡಿವ ನೀರು ಹಾಗೂ ಬೀದಿ ದೀಪಗಳನ್ನು ಅಳವಡಿಸುವಂತೆ ಹಲವಾರು ಬಾರಿ ಲಿಖಿತ ಮತ್ತು ಮೌಖಿಕವಾಗಿ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಶೌಚಾಲಯವಿಲ್ಲ: ಮಹಿಳಾ ಶೌಚಾಲಯವಿಲ್ಲದೇ ಇಲ್ಲಿನ ಮಹಿಳೆಯರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇನ್ನೂ ಜಾಲಿ ಮರಗಳ ಪೊದೆಯೇ ಇಲ್ಲಿ ಬಹಿರ್ದೆಸೆಗೆ ಆಸರೆಯಾಗಿವೆ. ರಾತ್ರಿ ವೇಳೆ ಹೊರಗಡೆ ತೆರಳಿದರೆ ವಿಷ ಜಂತುಗಳು ಕಾಟ ವಿಪರೀತವಾಗಿದ್ದು, ಅದಕ್ಕಾಗಿ ಇಲ್ಲಿ ವಾಸಿಸಲು ಭಯವಾಗುತ್ತಿದೆ ಎನ್ನುವುದು ನಿವಾಸಿಗಳ ಅಳಲಾಗಿದೆ. ಕಾಲೋನಿಗೆ ತೆರಳುವ ಮುಖ್ಯ ರಸ್ತೆ ಮತ್ತು ಒಳ ರಸ್ತೆಗಳನ್ನು ನಿರ್ಮಿಸಿಲ್ಲ. ಮುಖ್ಯ ರಸ್ತೆಗೆ ಗಟಾರ್ ನಿರ್ಮಿಸಿದ್ದಾದರೂ ಅದು ಅರ್ಧಕ್ಕೆ ನಿಂತಿದೆ. ರಾತ್ರಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ನಡೆದಾಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಂತೂ ದಿನವಿಡೀ ದುಡಿದು ರಾತ್ರಿಯೆಲ್ಲಾ ಮನೆಗೆ ನುಗ್ಗುವ ಮಳೆ ನೀರನ್ನು ಸ್ವಚ್ಛಗೊಳಿಸುವುದೇ ಕಾಯಕವಾಗಿದೆ.
ಆಶ್ರಯ ಕಾಲೋನಿಗೆ ಸುಮಾರು 25 ವರ್ಷಗಳಿಂದ ಯಾವುದೇ ಸೌಲಭ್ಯಗಳಿಲ್ಲ. ಕೇಳಿದರೆ ಅನುದಾನ ಬಿಡುಗಡೆಯಾಗಿಲ್ಲ. ಅಬಿವೃದ್ಧಿ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಸಬೂಬು ಹೇಳುತ್ತಾ ಬಂದಿದ್ದಾರೆ. ದಿನ ಪೂರ್ತಿ ಕೂಲಿ ಮಾಡಿ ರಾತ್ರಿ ನೆಮ್ಮದಿಯಿಂದ ಕಳೆಯಲು ಇಲ್ಲಿ ಆಗುತ್ತಿಲ್ಲ.
- ನಾಗಪ್ಪ ಕೊಪ್ಪಳ, ದುರ್ಗಪ್ಪ ಕೊರವರ, ಹನಮಂತಪ್ಪ ಕೊರವರ
(ಆಶ್ರಯ ಕಾಲೋನಿ ನಿವಾಸಿಗಳು)
ಮಳಿ ಬಂದ್ರ ಮೊಣಕಾಲ ಮಟಾ ನೀರು ಬಂದು ಮನ್ಯಾಗ ನಿಂದ್ರತೈತಿ, ನೀರ್ ಹರದ ಹೋಗಾಕ್ ವ್ಯವಸ್ಥಾ ಮಾಡ್ರಿ ಯಪ್ಪಾ ಅಂದ್ರ.. ಯಾರು ಕಿವಿಯಾಗ ಹಾಕ್ಕೊವಲ್ರೂ. ಶಾಸಕ ಜಿ.ಎಸ್.ಪಾಟೀಲ್ರು ಮನಸ್ ಮಾಡಿದ್ರ ಎಲ್ಲಾ ಆಕೈತಿ.
- ಯಲ್ಲವ್ವ ಕೊಪ್ಪದ, ಹಸನಬೀ ಗೌರಾಳ
(ಆಶ್ರಯ ಕಾಲೋನಿ ಮಹಿಳೆಯರು)
ಈ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಪ್ರಸಕ್ತ ಸಾಲಿನ ಎಸ್ಎಫ್ಸಿ ಅನುದಾನದಲ್ಲಿ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಿ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗುವದು. ಸ್ಥಳೀಯ ಶಾಸಕರ ಗಮನಕ್ಕೆ ತರಲಾಗುವದು.
- ಖಾದೀರಸಾಬ ಸಂಕನೂರ
11ನೇ ವಾರ್ಡ್ ಸದಸ್ಯ ಸದಾ ಸ್ವಿಚ್ಆಫ್
ಈ ಕುರಿತು ಕನ್ನಡಪ್ರಭ ಪುರಸಭೆ ಮುಖ್ಯಾಧಿಕಾರಿ ವಿ.ರಾಮಸ್ವಾಮಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರ ಮೊಬೈಲ್ ಸ್ವಿಚ್ಆಫ್, ಇನ್ನು ಕಚೇರಿಗೆ ತೆರಳಿದರೂ ಅವರು ಸಿಗುತ್ತಿಲ್ಲ. ಇವರಂತಹ ಅಧಿಕಾರಿಗಳು ಇರುವುದರಿಂದಲೇ ಸರಿಯಾದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎನ್ನುವ ಸಾರ್ವಜನಿಕರ ಆರೋಪ ಒಂದರ್ಥದಲ್ಲಿ ಸರಿ ಎನ್ನುವಂತಾಗಿದೆ.
-ಪಿ.ಎಸ್. ಪಾಟೀಲ್