ಮೌಢ್ಯತೆ ನಿವಾರಣೆ ಅಗತ್ಯ
ನರಗುಂದ: ನಮ್ಮ ದೇಶದಲ್ಲಿ ಯೋಗಿಗಳು, ಶರಣರು, ಸತ್ಪುರುಷರು, ಜಂಗಮರು ಜೀವಿಸಿ ಹೋಗಿದ್ದಾರೆ. ಇಂತಹ ನೆಲದಲ್ಲಿರುವ ಮೌಢ್ಯತೆ ತೊಡೆದು ಹಾಕುವುದು ಅವಶ್ಯವಿದೆ ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು. ಅವರು ಶುಕ್ರವಾರ ತಾಲೂಕಿನ ಭೈರಹನಹಟ್ಟಿ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಕಲಬುರ್ಗಿ ಶರಣಬಸವೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ 18ನೇ ವರ್ಷದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಭಾರತ ದೇಶವು ಬಹು ಇತಿಹಾಸ ಹೊಂದಿದ ದೇಶ. ಇಂತಹ ನಾಡಿನಲ್ಲಿ ಈಗಲೂ ಇರುವಂತಹ ಕೆಲವು ಮೌಢ್ಯತೆಗಳನ್ನು ಈಗಿನ ಯೋಗಿಗಳು, ಶರಣರು, ಜಂಗಮರು ತೊಡೆದು ಹಾಕಲು ಮುಂದಾಗಬೇಕು. ಜ್ಞಾನದೀವಿಗೆ ಆಗಿ ಬೆಳಕು ಚಲ್ಲಿದವರು ನಮಗೆ ಸ್ಮರಣೀಯರು. ಅವರ ಮಹಾಬೆಳಕಿನಲ್ಲಿ ಇರುವ ನಾವು, ದಯೆ, ಧರ್ಮ, ಪರೋಪಕಾರ, ಕಾಯಕ, ದಾಸೋಹದಂತಹ ಪುಣ್ಯ ಕಾರ್ಯದಲ್ಲಿ ತೊಡಗಿ ಸದೃಢ ಸಮಾಜ ಕಟ್ಟಲು ಮುಂದಾಗಬೇಕು ಎಂದರು. ಮಾಡಲಗೇರಿಯ ಜ್ಞಾನದೇವಿಯವರು ಮಾತನಾಡಿ, ಕಲಬುರ್ಗಿ ಶರಣಬಸವೇಶ್ವರರು ಲೌಕಿಕ, ಪಾರಮಾರ್ಥಗಳೆರಡನ್ನು ಅರಿತುಕೊಂಡು ನುಡಿದಂತೆ ನಡೆದು ತೋರಿಸಿ, ಭಕ್ತರ ಭವರೋಗ ಕಳೆದು ಹಲವಾರು ಪವಾಡಗಳ ಮೂಲಕ ಜನರನ್ನು ಜಾಗೃತಿ ಮಾಡಿ ಪುಣ್ಯ ಪುರುಷರೆಂದೆನಿಸಿಕೊಂಡಿದ್ದಾರೆ ಎಂದರು. ಹಿರೇಮಣ್ಣೂರಿನ ವಿರೂಪಾಕ್ಷಯ್ಯ ಶಾಸ್ತ್ರಿಗಳು ಮಾತನಾಡಿ, ನಮ್ಮ ಧರ್ಮದ ತಳಹದಿಯಲ್ಲಿ ನಡೆದು ತೋರಿಸಿದ ಶರಣರು ತಮ್ಮ ತನು, ಮನ, ಧನವನ್ನು ಸಮಾಜಕ್ಕೆ ಅರ್ಪಿಸಿದರು. ಇಂದಿನ ದಿನಮಾನದಲ್ಲಿ ಯುವಕರು ಧಾರ್ಮಿಕ ಮತ್ತು ಸಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಸಮಾಜ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಿವಯ್ಯ ಹಿರೇಮಠ, ಬಸಪ್ಪ ಐನಾಪುರ, ಧರ್ಮರಾಜಪ್ಪ ತೆಗ್ಗಿನಮನಿ, ಬಸಪ್ಪ ನರಸಾಪುರ ಮುಂತಾದವರು ಉಪಸ್ಥಿತರಿದ್ದರು. ವೀರಣ್ಣ ಐನಾಪುರ ಸ್ವಾಗತಿಸಿದರು. ಭೀಮಣ್ಣ ಅಕ್ಕೇರಿ ನಿರೂಪಿಸಿದರು. ಮಹಾಂತೇಶ ಹಿರೇಮಠ ವಂದಿಸಿದರು.