ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿರಹಟ್ಟಿ: ಮೂರು ದಿನಕ್ಕೊಮ್ಮೆ ನೀರು ಪೂರೈಕೆಗೆ ಕ್ರಮ

Vishwanath S
Updated On : 2 Jun 2013, 12:01 pm

ಶಿರಹಟ್ಟಿ: ಪಟ್ಟಣದ ವಿದ್ಯಾನಗರ, ವಿಜಯ ನಗರ, ಕುರುಬರ ಓಣಿಯಿಂದ 13ನೇ ವಾರ್ಡ್‌ವರೆಗೆ ತೀವ್ರ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಶುಕ್ರವಾರ 'ಕನ್ನಡಪ್ರಭ' ಈ ಕುರಿತು ವರದಿ ಪ್ರಕಟಿಸಿದ ಹಿನ್ನೆಯಲ್ಲಿ ಪಪಂ ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಲ್ಲಿ ನೀರು ಸರಬರಾಜು ಸಿಬ್ಬಂದಿ ಹಾಗೂ ಕಿರಿಯ ಅಭಿಯಂತರ ಜೆ.ಕೆ. ಉಳ್ಳಟ್ಟಿ ಅವರೊದೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು. ಸಮಸ್ಯೆಯ ಪಟ್ಟಿ ಸಿದ್ಧಪಡಿಸಿಕೊಂಡು ನಂತರ ನೀರು ಸರಬರಾಜು ಸಿಬ್ಬಂದಿಯ ಸಭೆ ಕರೆದು ವ್ಯವಸ್ಥಿತವಾಗಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ದೀರ್ಘವಾಗಿ ಚರ್ಚಿಸಿ, ರು. 10 ಲಕ್ಷ ವೆಚ್ಚದ ನೀರು ಸರಬರಾಜು ಸಾಮಗ್ರಿ ಖರೀದಿಗೆ ಪಟ್ಟಿ ಸಿದ್ಧಪಡಿಸಿದರು. ಹೊಸ ಮೋಟರ್ ಅಳವಡಿಕೆ, ಪೈಪ್‌ಲೈನ್ ಜೋಡಣೆ, ಅಲ್ಲಲ್ಲಿ ಸೋರುತ್ತಿರುವ ಪೈಪ್ ದುರಸ್ತಿ, ಪೈಪ್‌ನಲ್ಲಿ ಕಸ-ಕಡ್ಡಿ ತುಂಬಿಕೊಂಡು ಜಾಮ್ ಆಗಿ ನೀರು ಬರದೇ ತೊಂದರೆಯಾಗುತ್ತಿದ್ದ ಪ್ರದೇಶದಲ್ಲಿ ಹೊಸದಾಗಿ ಪೈಪ್ ಜೋಡಣೆ ಮಾಡಿ ವ್ಯವಸ್ಥಿತ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ವಿಜಯ ನಗರ ಬಡಾವಣೆಯಲ್ಲಿ ಕೆಟ್ಟು ನಿಂತ ಕೈಪಂಪು (ಕೊಳವೆಬಾವಿ) ದುರಸ್ತಿಗೂ ಕ್ರಮ ಕೈಗೊಳ್ಳಲಾಯಿತು. ಜತೆಗೆ ಇದೇ ಬಡಾವಣೆಯ ಶಿವಲಿಂಗಪ್ಪ ಪ್ಲಾಟ್‌ನಲ್ಲಿಯ ಜನತೆಗೆ ನಲ್ಲಿ ನೀರು ಪೂರೈಕೆಗೆ ಹೊಸದಾಗಿ ಬರಗಾಲ ಕಾಮಗಾರಿ ಯೋಜನೆಯಡಿ ಪೈಪ್ ಜೋಡಣೆ ಕಾರ್ಯವನ್ನು ಪ್ರಾರಂಭಿಸಿದರು. ನೀರು ಸರಬರಾಜು ಸಿಬ್ಬಂದಿ ತಮಗೆ ನೀಡಿದ ಜವಾಬ್ದಾರಿಯನ್ನು ಯಾವುದೇ ನೆಪ ಹೇಳದೇ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ತಮ್ಮ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಒಟ್ಟಾರೆ ವಿದ್ಯುತ್ ಸಮಸ್ಯೆಯಿಂದ ಮಾತ್ರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆಯೇ ಹೊರತು ನಿರಂತರ ವಿದ್ಯುತ್ ಸರಬರಾಜಾದಲ್ಲಿ  ಜನತೆಗೆ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಡಿ.ಟಿ. ದೊಡ್ಡಮನಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement