ಹಮಾಲರ ಸಮಸ್ಯೆಗೆ ಸ್ಪಂದಿಸುವೆ: ಜಿ.ಎಸ್. ಪಾಟೀಲ್
ಮುಂಡರಗಿ: ಸರ್ಕಾರ ಹಮಾಲರು ಹಾಗೂ ಇತರ ಕಾರ್ಮಿಕರ ಆರೋಗ್ಯ ಸೇವೆಗಾಗಿ ರು. 30 ಸಾವಿರ ವೈದ್ಯಕೀಯ ಸಹಾಯ ನೀಡಲಿದೆ. ರೈತರ ಮತ್ತು ಎಪಿಎಂಸಿ ವರ್ತಕರ ನಡುವಿನ ಕೊಂಡಿಯಾಗಿರುವ ಹಮಾಲರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತಾವು ಹಾಗೂ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಮಾಲರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧರಿರುವುದಾಗಿ ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಮುಂಡರಗಿ ಪಟ್ಟಣದಲ್ಲಿ ಎಪಿಎಂಸಿ ಹಮಾಲರು ಮತ್ತು ಯಕ್ಕಾಗಾಡಿ ಸಂಘದವರು ರೋಣ ಮತ್ತು ಶಿರಹಟ್ಟಿ ಶಾಸಕರಿಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿಮಾ ಜತೆಗೆ ಶೀಘ್ರದಲ್ಲಿ ಪೆನ್ಶನ್ ಯೋಜನೆ ಜಾರಿಗೊಂಡು ಹಮಾಲರ ಬದುಕಿಗೆ ಆಸರೆಯಾಗಲಿದೆ. ಈಗಾಗಲೇ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಸಹ ಜಾರಿಯಲ್ಲಿದೆ. ಕೇಂದ್ರ ಕಾರ್ಮಿಕ ಇಲಾಖೆ ಪಿಂಚಣಿ ಯೋಜನೆ ಜಾರಿಗೊಳಿಸಲಿದೆ.
ಮುಂಡರಗಿ ಎಪಿಎಂಸಿ ಈಗ ಅಭಿವೃದ್ಧಿಗೊಳ್ಳುತ್ತಿದ್ದು, ಇಲ್ಲಿ ಬರುವ ಆದಾಯವೂ ಹೆಚ್ಚಾಗಿದೆ. ಹೀಗಾಗಿ ಹಮಾಲರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲಾಗುವುದು. ಸರ್ಕಾರ ರಾಜ್ಯದ 5 ಸಾವಿರ ಗ್ರಾಮಗಳಿಗೆ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಮಾಡಲಿದೆ. ಅದರಲ್ಲಿ ಮುಂಡರಗಿ ಎಪಿಎಂಸಿಯಲ್ಲಿಯೂ ಸಹ ಶುದ್ಧ ನೀರಿನ ಘಟಕ ಮತ್ತು ಆಶ್ರಯ ಮನೆಗಳನ್ನು ಪೂರೈಸಲು ಕ್ರಮ ಜರುಗಿಸಲಾಗುವುದು. ಒಟ್ಟಾರೆ ಹಮಾಲರ ಮತ್ತು ಕಾರ್ಮಿಕರ, ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸ್ಥಳೀಯ ಹಮಾಲರು 600 ಮನೆಗಳ ಮಂಜೂರಾತಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕೂಡಲೇ ಚರ್ಚಿಸಿ ಮನೆ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ 56ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಶಾಸಕ ಜಿ.ಎಸ್. ಪಾಟೀಲ ಹಾಗೂ ಇತರ ಗಣ್ಯರು ಶುಭ ಕೋರಿದರು. ವರ್ತಕರ ಸಂಘದ ಅಧ್ಯಕ್ಷ ರಾಮಸ್ವಾಮಿ ಹೆಗ್ಗಡಾಳ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಉಪಾಧ್ಯಕ್ಷ ಹಾಲಪ್ಪ ಉಳ್ಳಾಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಸದಸ್ಯ ಗೂಳಪ್ಪ ಸಂಗನಾಳ, ನೀಲಕಂಠಪ್ಪ ಪತ್ತಾರ, ರವಿಂದ್ರ ಉಪ್ಪಿನಬೆಟಗೇರಿ, ಡಾ. ಬಿ.ಎಸ್. ಮೇಟಿ, ರಾಮಣ್ಣ ಬಳ್ಳಾರಿ, ದೃವಕುಮಾರ ಹೊಸಮನಿ, ದೇವಪ್ಪ ರಾಮೇನಹಳ್ಳಿ, ಎ.ಆರ್. ಕಟ್ಟಿಮನಿ, ಆನಂದಗೌಡ ಪಾಟೀಲ, ಡಿ.ಡಿ. ಮೋರನಾಳ, ಡಿ.ಸಿ. ಪಾಟೀಲ, ಹಾಲಪ್ಪ ಬಂಡಿವಡ್ಡರ ಮುಂತಾದವರು ಪಾಲ್ಗೊಂಡಿದ್ದರು. ಎಪಿಎಂಸಿ ಮಾಜಿ ಸದಸ್ಯ ಕೊಟ್ರೇಶ ಅಂಗಡಿ ಸ್ವಾಗತಿಸಿದರು. ಸ್ವಾಮಿ ಸತ್ಯಮ್ಮನವರ ನಿರೂಪಿಸಿದರು.