ಮಕ್ಕಳು ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ, ಮುಳಗುಂದ, ಜೂ. 2
ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದಷ್ಟೆ ಸಾಧನೆಯಲ್ಲ, ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿರುವ ಎಲ್ಲ ಮಾರ್ಗಗಳಲ್ಲಿಯೂ ಪರಿಣಿತಿಯನ್ನು ಹೊಂದಿ ನಿರಂತರ ಕ್ರಿಯಾಶೀಲತೆ ಗುಣ ಬೆಳೆಸಿಕೊಳುವ ಅಗತ್ಯವಿದೆ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶಿವಪ್ಪ ಕುರಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಬೀರಲಿಂಗೇಶ್ವರ ಟ್ರಸ್ಟ್ ವತಿಯಿಂದ ಗದಗ ಜಿಲ್ಲೆಯ ಹಾಲುಮತ (ಕುರುಬ) ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ಈ ಸಮಾಜದಲ್ಲಿ ಇಂದು ಹೆಚ್ಚು ಮಕ್ಕಳು ಹಲವಾರು ಕಾರಣಗಳಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಕಡ್ಡಾಯ ಶಿಕ್ಷಣ ಕಾಯ್ದೆಯಿಂದ ಎಲ್ಲ ಮಕ್ಕಳಿಗೂ ಅನ್ನ, ಬಟ್ಟೆ, ಪುಸ್ತಕ, ವಸತಿ ಹಾಗೂ ಇನ್ನಿತರ ಹಲವಾರು ಶೈಕ್ಷಣಿಕ ಸೌಲಭ್ಯಗಳಿದ್ದು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ದನ, ಕುರಿ, ಕೂಲಿ ಹಾಗೂ ಕೃಷಿ ಕೆಲಸಕ್ಕಾಗಿ ಬಳಸುತ್ತಿರುವುದು ನೋವಿನ ಸಂಗತಿ. ಶಿಕ್ಷಣದಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಬೆಳೆಯಲಿದ್ದು ಸಮಾಜದ ಅಭಿವೃದ್ಧಿಗೆ ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದರು.
ಬಿ.ಡಿ. ಹರ್ತಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲಿಯೋ ತನ್ನದೆ ಆದ ಕೌಶಲ್ಯತೆಗಳಿದ್ದು, ಮಕ್ಕಳನ್ನು ಸಮಾಜ, ಕುಟುಂಬ, ಶಿಕ್ಷಣ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹ ನೀಡಬೇಕು.
ಮಕ್ಕಳು ಕೀಳರಿಮೆಯನ್ನು ದೂರವಿರಿಸಿ ಶಿಕ್ಷಣದ ಬೆಳವಣಿಗೆಗಾಗಿ ಸದಾ ಉತ್ತಮ ಚಿಂತನೆ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್.ಬಿ.ದೊಡ್ಡಣ್ಣವರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ಹಾಲುಮತ (ಕುರುಬ) ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೇಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಕ್ಕೀರಯ್ಯ ಅಮೋಘಿಮಠ ವಹಿಸಿದ್ದರು. ಅತಿಥಿಗಳಾಗಿ ಪಪಂ ಸದಸ್ಯ ಮಹಾಂತೇಶ ನೀಲಗುಂದ, ಎಸ್.ವಿ. ತಮ್ಮನಗೌಡ್ರ, ಡಿ.ಎಚ್.ಮಲ್ಲೇಶ, ಕರಿಗಾರ, ಆರ್.ಸಿ.ಗುಂಜಳ, ಹೊನ್ನಪ್ಪ ನೀಲಗುಂದ, ಮಾಂತಪ್ಪ ಜಂಪಾಳಿ, ಮಹೇಶ ಶಿರಹಟ್ಟಿ, ಬಸವರಾಜ ಅಣ್ಣಿಗೇರಿ, ದೇವಪ್ಪ ಬಸರಿ, ದೇವಪ್ಪ ಲಕ್ಕುಂಡಿ, ಇಬ್ರಾಹಿಂಸಾಬ ದುರ್ಗಿಗುಡಿ, ಸೋಮಣ್ಣ ನವಲಗುಂದ, ಶಂಕ್ರಪ್ಪ ಜಂಪಾಳಿ, ಈರಪ್ಪ ದೊಟಿಕಲ್ಲ, ಫಕ್ಕಿರೇಶ ಅಳ್ಳಣ್ಣವರ, ಮಾಂತಪ್ಪ ಕನಕೇರಿ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ನಿಮ್ಮನಾಯ್ಕರ ಸ್ವಾಗತಿಸಿದರು. ತೇಜಸ್ವಿನಿ ಹರ್ತಿ ನಿರೂಪಿಸಿದರು. ಷಣ್ಮುಕ ಶಿರಹಟ್ಟಿ ವಂದಿಸಿದರು.