ಮಹಾತ್ಮಾಗಾಂಧಿ ಪ್ರತಿಮೆ ಉದ್ಘಾಟನೆ ಯಾವಾಗ?
ಕನ್ನಡಪ್ರಭ ವಾರ್ತೆ, ರೋಣ, ಜೂ. 2
ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಪ್ರತಿಮೆಯನ್ನು ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಸ್ಥಾಪಿಸಿ 5 ತಿಂಗಳಾದರೂ ತಾಲೂಕು ಆಡಳಿತ ಇನ್ನೂ ಉದ್ಘಾಟನೆಗೆ ಮುಂದಾಗಿಲ್ಲ. ಪ್ರತಿಮೆಯ ಉದ್ಘಾಟನೆ ಯಾವಾಗ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ನೂರಾರು ವರ್ಷಗಳ ಕಾಲ ಭಾರತೀಯರನ್ನು ಗುಲಾಮರಂತೆ ಆಳಿದ ಪರಕೀಯರ ಕಪಿಮುಷ್ಠಿಯಿಂದ ಬಂಧ ಮುಕ್ತಗೊಳಿಸಲು ಅಹಿಂಸಾ ಮಾರ್ಗ ಅನುಸರಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿಯ ನೆನಪಿಗಾಗಿ ರೋಣ ಮನಿ ವಿಧಾನಸೌಧ ಮುಂದೆ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ಗುರುಪಾದಪ್ಪ ಸಂತೋಜಿ ಇವರು ತಮ್ಮ ಸ್ವಂತ ಖರ್ಚಿನಿಂದ (ಸುಮಾರು ರು. 4 ಲಕ್ಷ) ಗಾಂಧಿ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಪ್ರತಿಮೆ ನಿರ್ಮಾಣಗೊಂಡು 5 ತಿಂಗಳು ಗತಿಸುತ್ತಾ ಬಂದರೂ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಜನಪ್ರತಿನಿಧಿಗಳ ವಿಳಂಭ ನೀತಿಯಿಂದಾಗಿ ಮೂರ್ತಿ ಅನಾವರಣಗೊಳ್ಳುವ ಭಾಗ್ಯ ಕಂಡಿಲ್ಲ.
ವಿಳಂಭವೇಕೆ?: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅಮರರಾದ ಮತ್ತು ಹೋರಾಟ, ಚಳವಳಿಯಲ್ಲಿ ಭಾಗಿಯಾದ ತಾಲೂಕಿನ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಈ ಗಾಂಧಿ ಪ್ರತಿಮೆಯ ಕೆಳಗೆ ಕೆತ್ತಲಾಗಿದೆ. ಈ ಹೆಸರುಗಳನ್ನು ಕೆತ್ತಿದ್ದರಿಂದ ಅದು ಖಾಸಗಿಯವರ ಪ್ರಚಾರವಾಗುತ್ತದೆ. ಬೇಕಿದ್ದರೆ ಗಾಂಧಿ ಪ್ರತಿಮೆ ನಿಲ್ಲಿಸಿ. ಆದರೆ, ಅಲ್ಲಿ ಯಾರ ಹೆಸರು ಬರೆಯುವಂತಿಲ್ಲ. ಖಾಸಗಿಯವರು ಸರ್ಕಾರಿ ಜಾಗೆಯಲ್ಲಿ ಪ್ರತಿಮೆ ನಿರ್ಮಿಸಿರುವುದರಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಬರೆಯಿಸಲಾದ ಹೆಸರುಗಳನ್ನು ತೆಗೆಯಿಸಿ, ಉದ್ಘಾಟನೆಗೆ ಅವಕಾಶ ನೀಡಿ ಎಂಬ ನಿರ್ದೇಶನವನ್ನು ಜಿಲ್ಲಾಡಳಿತವು ತಾಲೂಕು ಆಡಳಿತಕ್ಕೆ ನೀಡಿದೆ ಎಂದು ಸ್ವಾತಂತ್ರ್ಯ ಹೋರಾಟಗಾರನ ಪುತ್ರ ಕಳಕಪ್ಪ ಸಂತೋಜಿ ಹೇಳುತ್ತಾರೆ.
ಹೋರಾಟಗಾರ ?: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ವಾಸ ಅನುಭವಿಸಿದವರು ಅಸಂಖ್ಯಾತರಿದ್ದಾರೆ. ಅದರಲ್ಲಿ ಪಟ್ಟಣದ ಗುರಪಾದಪ್ಪ ಸಂತೋಜಿ ಒಬ್ಬರು. ಗಾಂಧೀಜಿಯವರು 1941ರಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾರಂಭಿಸಿದ ಸತ್ಯಾಗ್ರಹದಲ್ಲಿ ಭಾಗಿಯಾಗಿ, 1942ರ ಭಾತರ ಬಿಟ್ಟು ತೊಲಗಿ ಚಳವಳಿ ಮತ್ತು 1944ರಲ್ಲಿ ಹೋರಾಟದಲ್ಲಿ ಭಾಗಿಯಾಗಿ ಹಿಡಂಲಗಾ ಜೈಲು, ನವಲಗುಂದ ಜೈಲನಲ್ಲಿ 3 ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.
1939ರಲ್ಲಿ ಗಾಂಧೀಜಿಯವರು ತಾಲೂಕಿನ ಜಕ್ಕಲಿ ಗ್ರಾಮಕ್ಕೆ ಬಂದಾಗ ಅಂದಾನಪ್ಪ ದೊಡ್ಡಮೇಟಿಯವರೊಂದಿಗೆ ಇವರು ಮುಂದಾಳತ್ವವಹಿಸಿ ಗಾಂಧೀಜಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. 96ರ ಇಳಿವಯಸ್ಸಿನಲ್ಲಿಯೂ ಹೋರಾಟದ ಸಿಹಿ, ಕಹಿ ಘಟನೆಗಳ ಬುತ್ತಿಯನ್ನು ಬಂದವರೆದುರು ಬಿಚ್ಚಿಡುವ ಗುರುಪಾದಪ್ಪ ಸಂತೋಜಿಯವರ ಹೋರಾಟದ ಮನೋಭಾವ ಇನ್ನೂ ಕುಂದದಿರುವುದು ಆಶ್ಚರ್ಯ ಮೂಡಿಸುತ್ತದೆ.
ಗಾಂಧಿ ಪ್ರತಿಮೆ ನಿರ್ಮಿಸಿ 5 ತಿಂಗಳಾಯಿತು. ಸಚಿವರಾಗಿದ್ದ ಕಳಕಪ್ಪ ಬಂಡಿಯವರನ್ನು ಉದ್ಘಾಟನೆಗೆ ಕೇಳಿಕೊಂಡೆವು. ಆದರೆ, ಸ್ಥಳೀಯ ಮತ್ತು ಸಾರ್ವತ್ರಿಕ ಚುನಾವಣೆ ಬಂದಿದ್ದರಿಂದ ಅವಕಾಶ ಸಿಗಲಿಲ್ಲ. ತಾಲೂಕು ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ. ಶಾಸಕ ಜಿ.ಎಸ್. ಪಾಟೀಲ್ ಅವರನ್ನು ವಿನಂತಿಸಿದ್ದೇವೆ. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಉದ್ಘಾಟನೆ ಮಾಡುವುದಾಗಿ ಹೇಳಿದ್ದಾರೆ.
- ಕಳಕಪ್ಪ ಸಂತೋಜಿ
ಸ್ವಾತಂತ್ರ್ಯ ಹೋರಾಟಗಾರ ಗುರುಪಾದಪ್ಪ ಅವರ ಪುತ್ರ
ಕಂದಾಯ ಇಲಾಖೆ ಜಾಗೆಯಲ್ಲಿ ಗಾಂಧಿ ಪ್ರತಿಮೆಯನ್ನು ಖಾಸಗಿ ವ್ಯಕ್ತಿಗಳು ನಿರ್ಮಿಸಿದ್ದನ್ನು ಸ್ವಾಗತಿಸುತ್ತೇವೆ. ಉದ್ಘಾಟನೆ ದಿನಾಂಕ ಅವರೇ ಗೊತ್ತು ಪಡಿಸಬೇಕು. ಆದರೆ, ಗಾಂಧಿ ಪ್ರತಿಮೆ ಕೆಳಗೆ ಗಾಂಧಿ ಹೆಸರು ಹೊರತು ಪಡಿಸಿ ಬೇರೆ ಯಾರದ್ದೂ ಹೆಸರು ಬರೆಸಕೂಡದು ಎಂದು ಜಿಲ್ಲಾಡಳಿತದಿಂದ ಸುತ್ತೋಲೆ ಬಂದಿದೆ. ಅದಕ್ಕಾಗಿ ವಿಳಂಬವಾಗಿದೆ.
-ಎಂ.ಬಿ. ಪಾಟೀಲ್
ತಹಸೀಲ್ದಾರ್, ರೋಣ
ಪಿ.ಎಸ್. ಪಾಟೀಲ್